ಕರ್ನಾಟಕ

karnataka

ETV Bharat / state

ದೇಶದ ಹಳ್ಳಿಗಳ ಮನೆ- ಮನೆಗೂ ಅಂತರ್ಜಾಲ ಸಂಪರ್ಕ: ಕಟೀಲ್ - BJP President Nalin Kumar Katil

ಶೀಘ್ರದಲ್ಲಿ ಬಿಎಸ್‍ಎನ್‍ಎಲ್ ಟವರ್ ಸಮಸ್ಯೆಯನ್ನು ಪರಿಹರಿಸಲಾಗುವುದು. ಕಸ್ತೂರಿ ರಂಗನ್ ವರದಿಯಿಂದ ಈ ಭಾಗದ ಜನತೆಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರ ವಹಿಸಲಾಗುವುದು. ಗ್ರಾಪಂ ಗಳಿಗೆ ಒಂದು ಕೋಟಿ ನೀಡಿ ನೀರು ಮೊದಲಾದ ಮೂಲಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು..

Balthangadi
Balthangadi

By

Published : Nov 22, 2020, 9:36 PM IST

ಬೆಳ್ತಂಗಡಿ :ದೇಶದ ಹಳ್ಳಿಗಳಿಗೂ ಒಂದು ವರ್ಷದೊಳಗಾಗಿ ದೂರವಾಣಿ ಹಾಗೂ ಅಂತರ್ಜಾಲ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಸರ್ಕಾರದಿಂದ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ನೆರಿಯ ಗ್ರಾಮದ ಬಳಿ ಕೇಂದ್ರೀಯ ರಸ್ತೆ ನಿಧಿ ಯೋಜನೆಯಡಿ 6 ಕೋಟಿ ರೂ. ವೆಚ್ಚದ ಕಕ್ಕಿಂಜೆ-ನೆರಿಯ-ಪುದುವೆಟ್ಟು ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಪ್ರತಿ ಹಳ್ಳಿಯ ಮನೆ-ಮನೆಗಳಿಗೆ ಇಂಟರ್ನೆಟ್ ಸೌಲಭ್ಯ ಒದಗಿಸುವ ಕೆಲಸ ನಡೆಯಲಿದೆ.

ಕೇಂದ್ರ ಸರ್ಕಾರ ಗ್ರಾಮ ಸ್ವರಾಜ್ಯದ ಕಲ್ಪನೆಯಡಿ ಹಳ್ಳಿಗಳ ಅಭಿವೃದ್ಧಿ ನಡೆಯುತ್ತಿದೆ. ಪ್ರತಿ ಹಳ್ಳಿಗಳ ರಸ್ತೆಯೂ ಅಭಿವೃದ್ಧಿಯಾಗಬೇಕೆಂದು ಈ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಧಾನಿಗಳು ಹಾಗೂ ರಾಜ್ಯ ಸರ್ಕಾರದ ಇಚ್ಛಾಶಕ್ತಿಯಿಂದ ಹಳ್ಳಿಗಳ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದರು.

ಎಷ್ಟು ವರ್ಷ ಶಾಸಕರಾಗಿದ್ದಾರೆ ಎಂಬುದು ಮುಖ್ಯವಲ್ಲ, ಊರಿಗೆ ಏನು ಕೊಡುಗೆ ನೀಡಿದ್ದೀರಿ ಎಂಬುವುದು ಮುಖ್ಯ. ಅದರಲ್ಲೂ 2 ವರ್ಷದಲ್ಲೇ ಶಾಸಕ ಹರೀಶ್ ಪೂಂಜಾ ಅತೀ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ತಾಲೂಕಿನಲ್ಲಿ ಮಾಡಿದ್ದಾರೆ. ದಿನಕ್ಕೆ ಹತ್ತು ಬಾರಿ ಕರೆ ಮಾಡಿ ಅನುದಾನಗಳನ್ನು ವಿಚಾರಿಸುತ್ತಾರೆ. ಆದರೆ, ಅಧಿಕಾರದ ಕುರಿತು ಕೇಳಿಲ್ಲ.

ಬೆಂಗಳೂರಿನಲ್ಲಿದ್ದರೆ, ತಾಲೂಕಿನಲ್ಲಿ ನಡೆಯಬೇಕಾದ ಅಭಿವೃದ್ಧಿಯ ಪಟ್ಟಿ ಹಿಡಿದು ಸಿಎಂ ಮನೆಗೆ ಹೋಗುತ್ತಾರೆ. ಕೇಂದ್ರ ಸರ್ಕಾರದ ಕೇಂದ್ರೀಯ ರಸ್ತೆ ನಿಧಿ ಬಿಡುಗಡೆಗೆ ಶಾಸಕರು ಶ್ರಮಿಸಿದ್ದಾರೆ. ಜನಾಶೀರ್ವಾದಕ್ಕೆ ತಕ್ಕಂತೆ ತಾಲೂಕು ಹಾಗೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.

ಶೀಘ್ರದಲ್ಲಿ ಬಿಎಸ್‍ಎನ್‍ಎಲ್ ಟವರ್ ಸಮಸ್ಯೆಯನ್ನು ಪರಿಹರಿಸಲಾಗುವುದು. ಕಸ್ತೂರಿ ರಂಗನ್ ವರದಿಯಿಂದ ಈ ಭಾಗದ ಜನತೆಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರ ವಹಿಸಲಾಗುವುದು. ಗ್ರಾಪಂ ಗಳಿಗೆ ಒಂದು ಕೋಟಿ ನೀಡಿ ನೀರು ಮೊದಲಾದ ಮೂಲಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಬಳಿಕ ಶಾಸಕ ಹರೀಶ್ ಪೂಂಜಾ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನುದಾನವನ್ನು ಹಳ್ಳಿ ಹಳ್ಳಿಗೂ ಬಿಡುಗಡೆ ಮಾಡುವ ಮೂಲಕ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಸಾಕಾರಗೊಳಿಸುತ್ತಿದೆ. ಸಂಸದರೂ ಈ ಅನುದಾನವನ್ನು ತಾಲೂಕಿನ ಹಳ್ಳಿ ಹಳ್ಳಿಗೂ ತಲುಪಿಸುವ ಕಾರ್ಯ ಮಾಡಿದ್ದಾರೆ.

ನೆರಿಯಾ ಗ್ರಾಪಂ ವ್ಯಾಪ್ತಿಯ ಅಭಿವೃದ್ಧಿಗೆ ಸುಮಾರು 16 ಕೋಟಿ ರೂಗಳನ್ನು ಕೇವಲ 2 ವರ್ಷದಲ್ಲೇ ಬಿಡುಗಡೆ ಮಾಡುವ ಮೂಲಕ ಕಾರ್ಯ ಪ್ರವೃತರಾಗಿದ್ದಾರೆ ಎಂದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ನೆರಿಯ ಚರ್ಚ್‌ನ ಧರ್ಮಗುರುಗಳು, ಕೊಕ್ಕಡ ಸಿ ಎ ಬ್ಯಾಂಕ್ ಅಧ್ಯಕ್ಷ ಕುಶಾಲಪ್ಪ ಗೌಡ, ಜಿಪಂ ಸದಸ್ಯ ಕೊರಗಪ್ಪ ನಾಯ್ಕ, ನ.ಪಂ. ಉಪಾಧ್ಯಕ್ಷ ಜಯಾನಂದ ಗೌಡ, ರಮೇಶ್ ಇಂಜಿನಿಯರ್, ಶಕ್ತಿ ಕೇಂದ್ರದ ಅಧ್ಯಕ್ಷ ಬಾಬು ಗೌಡ ಪರ್ಕಳ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ವಿಶ್ವನಾಥ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ABOUT THE AUTHOR

...view details