ಮಂಗಳೂರು (ದಕ್ಷಿಣ ಕನ್ನಡ): ಕಳೆದ ವರ್ಷ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ನೀಡಿದರು. ಸುಳ್ಯ ತಾಲೂಕಿನ ಬೆಳ್ಳಾರೆಯ ನಿವಾಸಕ್ಕೆ ಆಗಮಿಸಿದ ಜೆ.ಪಿ.ನಡ್ಡಾ ಅವರನ್ನು ಪ್ರವೀಣ್ ಪೋಷಕರು ಮತ್ತು ಪತ್ನಿ ಹೂಗುಚ್ಛ ನೀಡಿ ಶಾಲು ಹೊದಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತಿತರರು ಉಪಸ್ಥಿತರಿದ್ದರು.
ನಡ್ಡಾ ಅವರು ಮನೆಯ ಮುಂಭಾಗದಲ್ಲಿದ್ದ ಪ್ರವೀಣ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಮನೆಯೊಳಗೆ ತೆರಳಿ ಪ್ರವೀಣ್ ಪೋಷಕರು ಮತ್ತು ಪತ್ನಿ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಪಾನೀಯ ಸೇವಿಸಿ ಕುಟುಂಬಸ್ಥರ ಪರಿಚಯ ಮಾಡಿಕೊಂಡರು. ಇಡೀ ದೇಶ ಮತ್ತು ಪಕ್ಷ ನಿಮ್ಮ ಜೊತೆ ಇದೆ ಎಂದು ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ನಡ್ಡಾ, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ. ತುಂಬಾ ದುಃಖದಾಯಕ ಘಟನೆ ನಡೆದು ಹೋಗಿತ್ತು. ಈ ಹತ್ಯೆಯ ಹಿಂದೆ ಪಿಎಫ್ಐ ಇದ್ದು, ಇದು ಖಂಡನೀಯ. ಘಟನೆ ನಂತರ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಲಾಯಿತು. ನಮ್ಮ ಸರ್ಕಾರ ನಿಷೇಧ ಮಾಡಿ ಎನ್ಐಎ ತನಿಖೆ ಮಾಡುತ್ತಿದೆ ಎಂದರು.