ಮಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ನಾಯಿ ಮರಿ ಪದ ಬಳಕೆ ಮಾಡಿರುವುದಕ್ಕೆ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ತಿರುಗೇಟು ನೀಡಿದ್ದಾರೆ. 'ಪ್ರತಿಪಕ್ಷ ನಾಯಕರು ಜವಾಬ್ದಾರಿಯುತವಾಗಿ ಮಾತನಾಡಿದರೆ ಒಳ್ಳೆಯದು. ಪ್ರಾಣಿಗಳ ಹೆಸರಿನಲ್ಲಿ ಮನುಷ್ಯರನ್ನು ಹೋಲಿಸಲು ಆರಂಭಿಸಿದ್ದಾರೆ. ಇನ್ಯಾರೋ ಅವರನ್ನು ಕತ್ತೆ ಎನ್ನಬಹುದು. ನಾಯಿ ನಿಯತ್ತಿನ ಪ್ರಾಣಿ, ಇವರು ನಾಯಿ ಆದ್ರೆ ಒಳ್ಳೆಯದು. ಡಿ.ಕೆ.ಶಿವಕುಮಾರ್ ಮತ್ತು ಇವರ ನಡುವಿನ ಗಲಾಟೆ ನೋಡಿದ್ರೆ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ನಾಯಿ ಆದರೆ ಒಳ್ಳೆಯದು' ಎಂದು ವಾಗ್ದಾಳಿ ನಡೆಸಿದರು.
ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಸಮರ್ಥನೆ: ಮಂಗಳೂರಿನಲ್ಲಿ ಮಾತನಾಡಿದ ಅವರು, ರಸ್ತೆ ಗುಂಡಿ ವಿಷಯ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಯನ್ನು ಸಮರ್ಥಿಸಿಕೊಂಡರು. 'ಕಟೀಲ್ ಅವರು ರಸ್ತೆ, ಗುಂಡಿ, ತೋಡುಗಳ ಕಾಮಗಾರಿ ಮಾಡುವ ಕೆಲಸ ಕಾರ್ಯಕರ್ತರದ್ದಲ್ಲ, ಅದು ಚುನಾಯಿತ ಪ್ರತಿನಿಧಿಗಳದ್ದು. ಕಾರ್ಯಕರ್ತರು ಈ ಬಗ್ಗೆ ಗಮನಹರಿಸಬೇಕಿಲ್ಲ. ಸ್ವಾಸ್ಥ್ಯ ಸಮಾಜ ನಿರ್ಮಾಣದ ಬಗ್ಗೆ ಗಮನಹರಿಸಿ' ಎಂದು ಹೇಳಿದ್ದಾರೆ ಎಂದರು.
ಯು.ಟಿ.ಖಾದರ್ ಹೇಳಿಕೆಗೆ ತಿರುಗೇಟು:ವಿಧಾನಸಭೆವಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರು ಬಿಜೆಪಿ ಸರ್ಕಾರವು ಗೋವುಗಳ ಹೆಸರಿನಲ್ಲಿ ಲೂಟಿ ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, 'ಯು.ಟಿ.ಖಾದರ್ ಗೋವು ತಿನ್ನುತ್ತಾರೆ ಕಾಣಬೇಕು, ಗೋವಿನ ಸಂತತಿ ಹೆಚ್ಚು ಮಾಡಲು ಕರ್ನಾಟಕ ಸರ್ಕಾರ ಪ್ರಯತ್ನ ಮಾಡುತ್ತಿದೆ. ಗೋವನ್ನು ಕಡಿದು ತಿನ್ನುವವರನ್ನು ಕಾಂಗ್ರೆಸ್ ಸಪೋರ್ಟ್ ಮಾಡುತ್ತಿದೆ. ನಮ್ಮ ಬಿಜೆಪಿ ಸರ್ಕಾರ ಗೋ ಕಳ್ಳತನ ತಡೆಯಲು ಕ್ರಮ ಕೈಗೊಂಡಿದೆ. ಕಾಂಗ್ರೆಸ್ ನಮ್ಮ ಜೊತೆಗೆ ಕೈ ಜೋಡಿಸಲಿ' ಎಂದರು. ಇದೇ ವೇಳೆ, 'ಕುಚ್ಚಲಕ್ಕಿ ವಿತರಣೆಗೆ ಸಂಬಂಧಿಸಿದಂತೆ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲೇ ರೇಷನ್ ಕಾರ್ಡ್ನಲ್ಲಿ ಜಿಲ್ಲೆಯ ಜನರಿಗೆ ಕುಚ್ಚಲಕ್ಕಿ ಸಿಗಲಿದೆ' ಎಂದು ತಿಳಿಸಿದರು.