ಮಂಗಳೂರು :ಬಿಜೆಪಿ ಮುಖಂಡರಿಗೆ ಆಧಾರ ರಹಿತ ಆರೋಪ ಮಾಡುವುದು ಒಂದು ಚಾಳಿ ಆಗಿದೆ. ಪಂಚರಾಜ್ಯ ಚುನಾವಣೆಯಲ್ಲಿ ಸೋಲಿನ ಭೀತಿ ಅವರನ್ನು ಕಾಡತೊಡಗಿದೆ. ಕರ್ನಾಟಕದಲ್ಲಿ ಅವರು ಧೂಳಿಪಟ ಆಗಲಿದ್ದಾರೆ ಎಂದು ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಪಂಚರಾಜ್ಯ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ ಎಟಿಎಂ ಆಗಿ ಬಳಕೆ ಆಗುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ಬಿಜೆಪಿ ಗಂಭೀರ ಆರೋಪ ಮಾಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ಯಾವ ರೀತಿ ಆಡಳಿತ ಕೊಟ್ಟಿದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಯಾವ ರೀತಿ ಕರ್ನಾಟಕವನ್ನ ಎಟಿಎಂಗಿಂತ ಕಡೆಯಾಗಿ ದುರುಪಯೋಗ ಮಾಡಿಕೊಂಡರು ಎಂಬುದನ್ನು ಜನ ನೋಡಿದ್ದಾರೆ. ಪಂಚರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಸೋಲಿನ ಭೀತಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಮಸಿ ಬಳಿಯುವ ಯತ್ನ ಮಾಡುತ್ತಿದ್ದಾರೆ. ಸುಳ್ಳಿನ ಆರೋಪ ಮಾಡುತ್ತಿದ್ದಾರೆ ಎಂದು ಸಚಿವರು ತಿರುಗೇಟು ನೀಡಿದರು.
ಐಟಿ, ಸಿಬಿಐ ಎಲ್ಲ ಸಂಸ್ಥೆಗಳು ಅವರ ಕೈಯಲ್ಲೇ ಇದೆ. ಐಟಿ, ಸಿಬಿಐ ಅವರ ನಿರ್ದೇಶನದಂತೆ ನಡೆಯುತ್ತಿದ್ದಾರೆ. ಬಿಜೆಪಿ ಆಡಳಿತ ಸಂದರ್ಭ ಅವರ ಮುಖಂಡರ ಮೇಲೆ ಐಟಿ, ಸಿಬಿಐ ದಾಳಿ ನಾವು ನೋಡಿಲ್ಲ. ಐಟಿ ರೇಡ್ ಬಗ್ಗೆ ಸಿಬಿಐ ತನಿಖೆಗೆ ಅವರು ಒತ್ತಾಯಿಸುತ್ತಿದ್ದಾರೆ. ಸಿಬಿಐಗೆ ಐಟಿ ಅವರೇ ಪ್ರಕರಣವನ್ನು ನೀಡಬೇಕು ಎಂದರು. ದಾಳಿ ಸಂದರ್ಭ ಯಾರಲ್ಲಿ ಹಣ ಸಿಕ್ಕಿದೆ ಅವರು ಯಾರೂ ಕಾಂಗ್ರೆಸ್ನವರಲ್ಲ. ಯಾರೇ ತಪ್ಪುಮಾಡಿದರೂ ಅವರ ವಿರುದ್ಧ ಕ್ರಮ ಆಗಲಿ. ಅದನ್ನು ನಾವು ಸ್ವಾಗತ ಮಾಡುತ್ತೇವೆ ಎಂದರು.
ನಮಗೆ ಆಪರೇಷನ್ ಅವಶ್ಯಕತೆ ಇಲ್ಲ:ನಮಗೆ ಆಪರೇಷನ್ ಹಸ್ತ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಪಕ್ಷಕ್ಕೆ ಸ್ವಯಂ ಪ್ರೇರಣೆ ಬಂದರೆ ಅವರ ಜೊತೆ ಮಾತನಾಡ ಬಹುದು. ಯಾವುದೇ ಪಕ್ಷವನ್ನು ಒಡೆಯುವ ಯಾವುದೇ ಅವಶ್ಯಕತೆ ನಮಗಿಲ್ಲ. ಜೆಡಿಎಸ್ನಿಂದ ಎಷ್ಟು ಜನ ಬರ್ತಾರೆ ಗೊತ್ತಿಲ್ಲ. ಆ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಸಮಾಧಾನ ಇಲ್ಲದಿರಬಹುದು. ರಾಜಕೀಯದಲ್ಲಿ ಈ ರೀತಿಯ ಬೆಳವಣಿಗೆ ಇದ್ದೇ ಇರುತ್ತದೆ. ಆಪರೇಷನ್ ಕಮಲ ಮಾಡಿದವರು ಯಾರು?. ಎಷ್ಟು ಕೆಟ್ಟರೀತಿಯಲ್ಲಿ ವ್ಯವಸ್ಥೆ ಹಾಳು ಮಾಡಿದರು ಎಂಬುದನ್ನ ಇಡೀ ದೇಶ ನೋಡಿದೆ. ಹಣಕೊಟ್ಟು, ಬೆದರಿಸಿ ಆಪರೇಷನ್ ಮಾಡುವುದರಲ್ಲಿ ಬಿಜೆಪಿ ಅವರೇ ಎಕ್ಸ್ಪರ್ಟ್ ಎಂದು ಸಚಿವರು ನೆನಪಿಸಿದರು.
ಅಧಿಕಾರಿಗಳ ಜತೆ ಚರ್ಚಿಸುತ್ತೇನೆ:ಮಂಗಳಾದೇವಿ ದೇವಸ್ಥಾನದಲ್ಲಿ ವ್ಯಾಪಾರ ಧರ್ಮದಂಗಲ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವ್ಯಾಪಾರ ಬಹಿಷ್ಕಾರದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಸಂವಿಧಾನದ ಪ್ರಕಾರ ದೇಶ ನಡೆಯಬೇಕು, ಯಾವುದೋ ಧರ್ಮದ ಪ್ರಕಾರ ಅಲ್ಲ. ಎಲ್ಲರಿಗೂ ಸಮಾನ ಹಕ್ಕುಗಳು ಈ ದೇಶದಲ್ಲಿ ಇರಬೇಕು. ವ್ಯಾಪಾರಕ್ಕೆ ಯಾರನ್ನೂ ನಿರ್ಬಂಧನೆ ಮಾಡುವುದು ಸರಿಯಲ್ಲ. ಕಾನೂನು ಪ್ರಕಾರ ಮಾಡಲಿ, ಕಾನೂನು ಬಿಟ್ಟು ಏನನ್ನೂ ಮಾಡಬಾರದು. ಅವರು ಕರೆ ಕೊಡಲಿ, ಅವರ ಕರೆಯನ್ನು ಯಾರೂ ಒಪ್ಪಿಕೊಳ್ಳಬೇಕಿಲ್ಲ. ಆ ಕರೆಗಳಿಗೆ ಯಾವುದೇ ಕಾನೂನಿನ ಹಿನ್ನೆಲೆ ಇಲ್ಲ. ಅವರಿಗೆ ಈ ಥರ ವಿಚಾರ ಇಟ್ಟುಕೊಂಡು ಜನರಲ್ಲಿ ಗೊಂದಲ ಮೂಡಿಸಬೇಕು. ಅವರ ರಾಜಕಾರಣ ಇದರಲ್ಲೇ ಇರೋದು, ಧಾರ್ಮಿಕ ರಾಜಕಾರಣ ಬಿಜೆಪಿ ಮಾಡುತ್ತೆ. ನಾನು ಈ ಬಗ್ಗೆ ಅಧಿಕಾರಿಗಳನ್ನು ಕರೆದು ಮಾತನಾಡ್ತೇನೆ ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ದ ಎಫ್ಐಆರ್ ದಾಖಲು ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಾರಾದರೂ ತಪ್ಪು ಮಾಡಿದರೆ ಅದು ಪ್ರಾಥಮಿಕ ವರದಿ ಎಫ್ಐಆರ್ ಆಗುತ್ತೆ. ತನಿಖೆಯಲ್ಲಿ ಏನಾಗುತ್ತೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗಲಿದೆ. ಅವರು ಆ ಥರ ಮಾತನಾಡಿದರೆ ಅದು ಸರಿಯಲ್ಲ. ಅರಣ್ಯ ಭೂಮಿ ಒತ್ತುವರಿ ಬಗ್ಗೆ ನನಗೆ ಪೂರ್ಣ ಮಾಹಿತಿ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ :ಬಿಜೆಪಿಯವರಿಗೆ ರಾಜಕೀಯ ಲಾಭ ಪಡೆಯುವುದೇ ಉದ್ದೇಶ: ಸಚಿವ ದಿನೇಶ್ ಗುಂಡೂರಾವ್