ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಹಿಂದೂ ಮಹಾಸಭಾದ ನಾಯಕರನ್ನು ಬಿಜೆಪಿ ಜೈಲಿಗಟ್ಟುತ್ತಿದೆ ಎಂದು ಅರೋಪ ಮಂಗಳೂರು :ಚುನಾವಣಾ ಭೀತಿಯಿಂದ ಬಿಜೆಪಿಯು ಹಿಂದೂ ಕಾರ್ಯಕರ್ತರು, ನಾಯಕರನ್ನು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ, ಆರೋಪಗಳನ್ನು ಹೊರಿಸಿ ಜೈಲಿಗಟ್ಟುತ್ತಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಅವರು ಆರೋಪಿಸಿದರು.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಜೇಶ್ ಪವಿತ್ರನ್ ಅವರು, ಪ್ರಮುಖವಾಗಿ ಹಿಂದೂ ಮಹಾಸಭಾದ ನಾಯಕರ ಕಾರ್ಯ ಮಾಡುವ ಇಚ್ಛಾಶಕ್ತಿಯನ್ನು ಕುಗ್ಗಿಸುವ, ಪಕ್ಷದ ಚಟುವಟಿಕೆಗಳನ್ನು ನಿಲ್ಲಿಸುವಂತಹ ಕಾರ್ಯಗಳನ್ನು ಬಿಜೆಪಿ ಸರ್ಕಾರ ಮಾಡುತ್ತ ಬರುತ್ತಿದೆ. ಈ ಹಿಂದೆಯೂ ಸಹಾ ದೇವಸ್ಥಾನ ದ್ವಂಸ ಪ್ರಕರಣದಲ್ಲೂ ಒಂದಕ್ಕೊಂದು ಸಂಬಂಧವಿಲ್ಲದ ಕೇಸ್ಗಳನ್ನು ಹಾಕಿದ್ದಾರೆ. ಹನಿಟ್ರ್ಯಾಪ್ ಪ್ರಕರಣದಲ್ಲಿ ನನ್ನನ್ನು ಬಲಿ ಮಾಡಿದ್ದು, ಸುರತ್ಕಲ್ ಠಾಣೆ ವ್ಯಾಪ್ತಿಯಲ್ಲಿ ಸುಳ್ಳು ಸುಲಿಗೆ, ಬೆದರಿಕೆ ಕೇಸ್ ಹಾಕಿ ಆರೋಪಿಸಿ ಜೈಲಿಗಟ್ಟಲು ಯತ್ನಿಸಿದರು. ಆದರೆ ಕೋರ್ಟ್ ಅವರಿಗೆ ಛೀಮಾರಿ ಹಾಕಿ ನನಗೆ ತಾತ್ಕಾಲಿಕ ಜಾಮೀನು ನೀಡಿದೆ ಎಂದರು.
ಇದನ್ನೂ ಓದಿ :ಖಾಸಗಿ ಮಾಹಿತಿ ಬಹಿರಂಗಪಡಿಸುವುದಾಗಿ ಉದ್ಯಮಿಗೆ ಬೆದರಿಕೆ: ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಬಂಧನ
ರಾಜ್ಯದಲ್ಲಿ ಪರ್ಯಾಯ ವ್ಯವಸ್ಥೆ ಬಗ್ಗೆ ಹಿಂದೂ ಸಮುದಾಯ ಮಾತನಾಡುತ್ತಿದ್ದು, ಹಿಂದೂ ಮಹಾಸಭಾ ಕೂಡಾ ಹಿಂದೂ ವಿರೋಧಿ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಲು ಎಲ್ಲಾ 224 ಕ್ಷೇತ್ರಗಳಲ್ಲೂ ಚುನಾವಣೆ ಎದುರಿಸಲಿದೆ. ಜನವರಿ 15ರಂದು ಬೆಂಗಳೂರಿನಲ್ಲಿ ನಡೆಯುವ ಹಿಂದೂ ಮಹಾಸಭಾದ ಪುನಶ್ಚೇತನ ಸಂಕಲ್ಪ ಕಾರ್ಯಕ್ರಮದಲ್ಲಿ 83 ಮಂದಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಿದ್ದೇವೆ. ಈ ಕಾರ್ಯಕ್ರಮಕ್ಕೆ ಈ ಹಿಂದೆ ಇದ್ದ ಬಿಜೆಪಿಯ ಮಾಜಿ ಎಂಪಿ ಸುಬ್ರಮಣ್ಯಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಬರುತ್ತಿದ್ದಾರೆ ಎಂದು ಹೇಳಿದರು.
ಇದನ್ನೆಲ್ಲ ಗಮನಿಸಿಕೊಂಡು ಎಲ್ಲೋ ಒಂದು ಕಡೆ ಬಿಜೆಪಿ ಸರ್ಕಾರ ಭಯಭೀತರಾಗಿ ಹಿಂದೂ ಮಹಾಸಭಾದ ಮನೋಬಲ ಕುಗ್ಗಿಸಲು ನಾಯಕರನ್ನು ಜೈಲಿಗೆ ಕಳುಹಿಸುವ ಕಾರ್ಯ ಮಾಡುತ್ತಿದೆ. ಬಿಜೆಪಿಯವರಿಗೆ ರಾಜಕೀಯ ಇಚ್ಛಾಶಕ್ತಿ ಇದ್ದು, ನಿಜವಾಗಿ ಅಧಿಕಾರಕ್ಕೆ ಬರಬೇಕೆಂದು ಇದ್ದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರತಿಸ್ಪರ್ಧಿಗಳನ್ನು ಸೋಲಿಸಲು ಯತ್ನಿಸಿ, ನಾವು ಚುನಾವಣೆಯಲ್ಲೇ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ. ಆದರೇ ಹಿಂದೂ ಸಮುದಾಯಕ್ಕೆ ಎಷ್ಟೇ ಪಕ್ಷ ಸಂಘಟನೆ ಮಾಡಿದ್ದರೂ ಕೂಡ ಕೊನೆಯಲ್ಲಿ ಹಿಂದೂ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸುವ ಮೂಲಕ ಅವರ ಕೆಲಸ ಆದ ಮೇಲೆ ಕಸದ ತೊಟ್ಟಿಗೆ ಹಾಕುತ್ತ ಬಂದಿದ್ದಾರೆ ಎಂದು ಸರ್ಕಾರದ ವಿರುದ್ಧ ರಾಜೇಶ್ ಪವಿತ್ರನ್ ಕಿಡಿಕಾರಿದರು.
ಇದಕ್ಕೆ ಒಂದು ಪರ್ಯಾಯ ಮಾರ್ಗವೆಂದರೆ ಚುನಾವಣೆಯಲ್ಲಿ ನಮ್ಮ ಹಿಂದೂ ನಾಯಕರುಗಳು ಅಧಿಕಾರಕ್ಕೆ ಬರುವಂತದ್ದು. ಅಧಿಕಾರಕ್ಕೆ ಬರುವುದಕ್ಕೆ ಇರುವಂತಹ ವೇದಿಕೆ ಎಂದರೆ ಹಿಂದೂ ಮಹಾಸಭಾ ಎಂದು ಹೇಳಿದರು. ಈ ವೇದಿಕೆಯನ್ನು ನಾವು ಮಾಡಿರುವುದಲ್ಲ ಬಿಜೆಪಿ, ಕಾಂಗ್ರೆಸ್ ರಾಜಕೀಯ ಪಕ್ಷಗಳು ಬರುವುದಕ್ಕೆ ಮುಂಚೆಯೇ ಇತಿಹಾಸ ಕಾಲದಲ್ಲಿ ಇದ್ದಂತದ್ದು ಹಿಂದೂ ಮಹಾಸಭಾ ಎಂದರು.
ಬಿಜೆಪಿಗೆ ಸವಾಲು ಹಾಕಿದ ರಾಜೇಶ್ ಪವಿತ್ರನ್.. ಬಿಜೆಪಿ ಯುವಾ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಬಿಜೆಪಿ, ಸಂಘ ಪರಿವಾರದ ದೊಡ್ಡ ಹುದ್ದೆಯಲ್ಲಿದ್ದವರು, ಕಾಂಗ್ರೆಸ್ ನ ನಾಯಕರು ಹಿಂದೂ ಮಹಾಸಭಾಕ್ಕೆ ಸೇರಿಕೊಳ್ಳುತ್ತಿದಾರೆ. ಹಿಂದೂಗಳಿಗೆ ರಕ್ಷಣೆ ಸಿಗುತ್ತಿಲ್ಲ. ಅದಕ್ಕೆ ನಮ್ಮ ಅವಶ್ಯಕತೆ ಇರುವ ಕಾರಣ ನಾವು ಚುನಾವಣಾ ಅಖಾಡಕ್ಕೆ ಇಳಿದಿದ್ದೇವೆ. ಆದ್ದರಿಂದ ನಮ್ಮೆಲ್ಲಾ ಶಕ್ತಿಯನ್ನು ಒಟ್ಟು ಮಾಡಿಕೊಂಡು ಈ ಚುನಾವಣೆಯನ್ನು ಎದುರಿಸಲಿದ್ದೇವೆ. ಬಿಜೆಪಿಯವರಿಗೆ ತಡೆಯಲು ಶಕ್ತಿ ಇದ್ದಲ್ಲಿ ತಡೆಯಲಿ ಎಂದು ಪವಿತ್ರನ್ ಸವಾಲು ಹಾಕಿದರು.
ಇದನ್ನೂ ಓದಿ :ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷರ ಬಂಧನ: ರಾಜಕೀಯ ಷಡ್ಯಂತ್ರ ಎಂದ ಧರ್ಮೇಂದ್ರ