ಮಂಗಳೂರು: ಉಳ್ಳಾಲದ ಆಸುಪಾಸು ಪರಿಸರದಲ್ಲಿ ಕಡಲ್ಕೊರೆತ ತಡೆಯಲು ಜಿಲ್ಲಾಡಳಿತ ಯಾರಿಗೆ ಕಾಮಗಾರಿ ನೀಡಿದ್ದಾರೋ, ಅವರು ಇನ್ನೂ ಕೆಲಸ ಪ್ರಾರಂಭಿಸಿಲ್ಲ. ಮನೆಗಳು ಬೀಳುವ ಸಂಭವವಿದೆ. ಈ ಪರಿಸರಗಳಲ್ಲಿ ಮೀನುಗಾರರ ಮನೆಗಳು ಬಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಿಜೆಪಿ ಪಕ್ಷವೇ ನೇರ ಹೊಣೆ ಎಂದು ಶಾಸಕ ಯು.ಟಿ. ಖಾದರ್ ಅಸಮಾಧಾನ ಹೊರಹಾಕಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಕಡಲ್ಕೊರೆತ ಸಂಭವಿಸಿದ ಪರಿಣಾಮ ಸೋಮೇಶ್ವರ ದೇವಾಲಯದ ಪಕ್ಕದಲ್ಲಿರುವ ಮನೆ ಕಡಲುಪಾಲಾಗುವ ಸ್ಥಿತಿಯಲ್ಲಿದೆ. ಅಧಿಕಾರಿಗಳಿಗೆ ಕರೆ ಮಾಡಿದಲ್ಲಿ ಜಿಲ್ಲಾಡಳಿತ ಸ್ಪಂದನೆ ನೀಡುತ್ತಿಲ್ಲ ಎಂಬ ಉತ್ತರ ಬರುತ್ತಿದೆ. ಹಾಗಾದಲ್ಲಿ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಕಡಲ್ಕೊರೆತವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದರೆ ಪ್ರಾಣಹಾನಿ, ಆಸ್ತಿಪಾಸ್ತಿಗಳ ಹಾನಿಯನ್ನು ತಡೆಗಟ್ಟಲು ಸಾಧ್ಯ. ಹಿಂದೆ ಅಲ್ಲಿ ಮಳೆಗಾಲದ ಸಂದರ್ಭದಲ್ಲಿ ಕಡಲ್ಕೊರೆತದ ತೀವ್ರತೆ ಕಡಿಮೆಗೊಳಿಸಲು ತಡೆಕಲ್ಲುಗಳನ್ನು ಹಾಕಲು ಸಾಕಷ್ಟು ಕಾಮಗಾರಿ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ನನ್ನ ಕ್ಷೇತ್ರಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯವರು ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆಗೆ ಆಗಮಿಸಿದ್ದಾಗ ನನಗೆ ಮಾಹಿತಿ ನೀಡಿಲ್ಲ. ಇದರ ಬಗ್ಗೆ ಸರ್ಕ್ಯೂಟ್ ಹೌಸ್ ನಲ್ಲಿ ಸಭೆ ಕರೆದಿದ್ದಾಗ ಕ್ಷೇತ್ರದ ಶಾಸಕನಾದ ನನಗೆ ಆಹ್ವಾನವಿರಲಿಲ್ಲ ಎಂದು ಆರೋಪಿಸಿದರು.
ಸೋಮೇಶ್ವರ, ಉಚ್ಚಿಲ ಭೋವಿ ಏರಿಯಾದಲ್ಲಿ ಜನರು ಭಯದಲ್ಲಿ ಬದುಕುವ ಪರಿಸ್ಥಿತಿ ಉಂಟಾಗಿದೆ. ಉಸ್ತುವಾರಿ ಸಚಿವರಿಗೆ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದಿದ್ದಲ್ಲಿ ಯಾಕೆ ಕಡಲ್ಕೊರೆತ ನಡೆಯುವ ಪ್ರದೇಶಕ್ಕೆ ತೆರಳಿದರು? ಅಲ್ಲದೆ ಮಳೆಯ ತೀವ್ರತೆಗೆ ಅಲ್ಲಲ್ಲಿ ಮನೆಗಳು ಕುಸಿದಿವೆ. ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ 20 ಮನೆಗಳು ಜಲಾವೃತಗೊಂಡಿವೆ. ಯಾವುದೇ ಅಧಿಕಾರಿಗಳು ಇನ್ನೂ ಅಲ್ಲಿಗೆ ಭೇಟಿ ನೀಡಿಲ್ಲ. ಎಲ್ಲದಕ್ಕೂ ಕೊರೊನಾ ನೆಪವೊಡ್ಡುತ್ತಿದ್ದಾರೆ. ಮಳೆಗಾಲದಲ್ಲಿ ಆಗುವ ಅನಾಹುತದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಕಂದಾಯ ಇಲಾಖೆ ಹಾಗೂ ಆರ್ ಡಿಪಿಆರ್ ಸಭೆ ಕರೆಯಲಿ ಎಂದು ಒತ್ತಾಯಿಸಿದರು.