ಮಂಗಳೂರು:ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವವರ ಮೇಲೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತಿದೆ. ಇದು ಫ್ಯಾಸಿಸಮ್ ಲಕ್ಷಣ. ಜರ್ಮನಿಯಲ್ಲಿ ಹಿಟ್ಲರ್ ಕಾಲದಲ್ಲಿಯೂ ಇದೇ ರೀತಿ ನಡೆಯುತ್ತಿತ್ತು. ಯಾರಾದರೂ ಪ್ರಶ್ನೆ ಮಾಡಿದರೆ ಅವರ ಮೇಲೆ ಕೇಸು ದಾಖಲಿಸೋದು, ದೇಶದ್ರೋಹದ ಪಟ್ಟ ಕಟ್ಟಿ ಜೈಲಿಗೆ ಕಳಿಸಲಾಗುತ್ತಿತ್ತು. ಇಲ್ಲೂ ಇದೇ ರೀತಿ ಪ್ರಾರಂಭವಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಮೂಡಿಗೆರೆ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಇಂದು ನಗರದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿ ಉಂಟಾದ ಪ್ರವಾಹ ಯಾವ ವರ್ಷವೂ ಬಂದಿರಲಿಲ್ಲ. ಕೇಂದ್ರದಿಂದ ಪ್ರವಾಹ ಪರಿಹಾರ ಅಂಥ 38 ಸಾವಿರ ಕೋಟಿ ರೂ. ಕೇಳಿದ್ದೆವು. ಆದರೆ ಕೇಂದ್ರ ಸರ್ಕಾರ ಕೇವಲ 1,200 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಹಣ ಯಾವುದಕ್ಕೂ ಸಾಲೋದಿಲ್ಲ. ಕನಿಷ್ಠ ಪಕ್ಷ ತಕ್ಷಣದ ಪರಿಹಾರ ಎಂದು 5 ಸಾವಿರ ಕೋಟಿ ಕೊಡಿ ಎಂದು ಕೇಳಿದ್ದೆವು. ಆದರೆ ಎರಡು ತಿಂಗಳ ಬಳಿಕ ಕೊಟ್ಟಿದ್ದು ಮಾತ್ರ 1,200 ಕೋಟಿ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ಪರಿಹಾರ ಹಣ ಕೊಡಲು ಒತ್ತಡ ಹಾಕಬೇಕಿತ್ತು. ಅಲ್ಲದೆ ತನ್ನ ಬೊಕ್ಕಸದಿಂದಾದರೂ ಖರ್ಚು ಮಾಡಬೇಕಿತ್ತು. ಅದನ್ನೂ ಮಾಡುತ್ತಿಲ್ಲ ಎಂದು ಗುಡುಗಿದ್ರು.
ಸಿಎಂ ಖಜಾನೆಯಲ್ಲಿ ಹಣವೇ ಇಲ್ಲ ಎನ್ನುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪನವರಿಗೆ ಹಣಕಾಸಿನ ಬಗ್ಗೆ ಜ್ಞಾನ ಇದೆಯೋ, ಇಲ್ಲವೋ ಗೊತ್ತಿಲ್ಲ. ಖಜಾನೆಯಲ್ಲಿ ಹಣ ಇಲ್ಲಾಂದ್ರೆ ತೆರಿಗೆ ವಸೂಲಾತಿಯಾಗುತ್ತಿಲ್ಲ ಎಂದರ್ಥ. ಪ್ರತೀ ತಿಂಗಳು ರಾಜ್ಯದ ಜನತೆ ತೆರಿಗೆ ಕೊಡೋದಿಲ್ಲವಾ ಎಂದು ಪ್ರಶ್ನಿಸಿದ್ರು.