ಮಂಗಳೂರು: ಚುನಾವಣೆ ಬರುತ್ತಿರುವ ಸಂದರ್ಭದಲ್ಲಿ ತುಳುವರ ಆಕ್ರೋಶ ತಪ್ಪಿಸಲು ಬಿಜೆಪಿ ಸರ್ಕಾರ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಎರಡನೇ ಭಾಷೆಯನ್ನಾಗಿ ಘೋಷಣೆ ಮಾಡುವ ವಿಚಾರವನ್ನು ಮುಂದಿಟ್ಟುಕೊಂಡು ಮೋಸ ಮಾಡುತ್ತಿದೆ ಎಂದು ವಿಧಾನಸಭಾ ವಿಪಕ್ಷ ಉಪನಾಯಕ ಯು ಟಿ ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು, ಅಧಿಕಾರ ಇಲ್ಲದೇ ಇದ್ದಾಗ ಈ ಬಗ್ಗೆ ಬೇಡಿಕೆಯನ್ನು ಬಿಜೆಪಿಯವರು ಇಟ್ಟಿದ್ದರು. ಬಿಜೆಪಿ ಶಾಸಕರು ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾದರೂ ತುಳುವನ್ನು ಎರಡನೇ ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಲಿಲ್ಲ. ಸರ್ಕಾರ ಅಧ್ಯಯನ ಸಮಿತಿ ಮಾಡಿರುವುದೇ ತುಳು ಭಾಷೆಗೆ ಮಾಡಿರುವ ಅವಮಾನ. ಸಾವಿರಾರು ವರ್ಷಗಳ ಇತಿಹಾಸವಿರುವ ತುಳು ಭಾಷೆಗೆ ಅಧ್ಯಯನ ಮಾಡಿ ವರದಿ ಕೊಡುವ ಅವಶ್ಯಕತೆ ಏನಿದೆ. ಇದು ಜನರಿಗೆ ಮೋಸ ಮಾಡುವ ತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿರಾಡಿ ಘಾಟ್ನಲ್ಲಿ ಟನಲ್ ವಿಚಾರ - ತೇಪೆಯಾದರೂ ಹಾಕಲಿ:ಕೇಂದ್ರ ಬಜೆಟ್ನಲ್ಲಿ ಕರಾವಳಿಗೆ ಒಂದೇ ಒಂದು ಅನುದಾನ ನೀಡಲಾಗಿಲ್ಲ. ಶಿರಾಡಿಗೆ ಸುರಂಗ ಮಾರ್ಗ ಎಂದು ಹಲವು ವರ್ಷಗಳಿಂದ ಹೇಳುತ್ತಿದ್ದರೂ, ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ಈ ಯೋಜನೆಗೆ ಹಣ ಇಟ್ಟಿಲ್ಲ. ರೈಲ್ವೆ ಪ್ರತ್ಯೇಕ ವಿಭಾಗ ಕೇಳಿದಾಗಲೂ ಸರ್ಕಾರದ ಸ್ಪಂದನೆಯಿಲ್ಲ. ಬಂದರು, ರಸ್ತೆಗೆ ಯಾವ ಅನುದಾನವನ್ನೂ ಸರ್ಕಾರ ನೀಡಿಲ್ಲ. ಶಿರಾಡಿ ಘಾಟ್ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಜನರಿಗೆ ಹೇಳಲಿ. ಟನಲ್ ಬೇಡ, ರಸ್ತೆಗೆ ತೇಪೆಯಾದರೂ ಹಾಕಲಿ ಎಂದು ಆಗ್ರಹಿಸಿದರು.
ಅಮಿತ್ ಷಾ ರೋಡ್ ಶೋ ವೇಳೆ ರಸ್ತೆಯ ಹೊಂಡ-ಗುಂಡಿಗಳನ್ನು ಲೆಕ್ಕ ಮಾಡಲಿ:ಫೆ.11ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳೂರಿನಲ್ಲಿ ರೋಡ್ ಶೋ ಮಾಡುತ್ತಿದ್ದಾರೆ. ಅವರನ್ನು ಕರಾವಳಿಗೆ ಸ್ವಾಗತ ಮಾಡುತ್ತೇವೆ. ರೋಡ್ ಶೋ ಮಾಡುವ ವೇಳೆ ಅವರು ರಸ್ತೆಯ ಹೊಂಡ - ಗುಂಡಿಗಳನ್ನು ಲೆಕ್ಕ ಮಾಡಲಿ. ಬೆಂಗಳೂರಿನಿಂದ ರಸ್ತೆ ಮಾರ್ಗದ ಮೂಲಕ ಮಂಗಳೂರಿಗೆ ಬರುವಂತೆ ಮಾಡಿದರೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸೆಲ್ಯೂಟ್ ಹೊಡೆಯುತ್ತೇನೆ ಎಂದು ಅವರು ವ್ಯಂಗ್ಯವಾಡಿದ್ದಾರೆ.