ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಪ್ರತಿಕ್ರಿಯೆ ಸುಳ್ಯ (ದಕ್ಷಿಣ ಕನ್ನಡ):ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮೀಕರಣ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ವಿಶೇಷವೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವಾಗಲೇ ಸುಳ್ಯದಲ್ಲಿ ಇದು ಬಿಜಿಪಿಗೆ ಒಲಿದಿದೆ. ಇದರಿಂದ ಕಾಂಗ್ರೆಸ್ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಯಾವುದೇ ಕಾರಣಕ್ಕೂ ಈ ಸಮಿತಿ ಅಸ್ತಿತ್ವಕ್ಕೆ ಬರಲು ಬಿಡಲ್ಲ ಎಂದು ಕಾಂಗ್ರೆಸ್ ಪ್ರಮುಖರು ಹೇಳಿಕೆ ನೀಡಿದ್ದಾರೆ. ಇಂದು ರಾಜ್ಯ ಸರ್ಕಾರದಿಂದ ಹೊರಡಿಸಲಾಗಿದೆ ಎನ್ನಲಾದ ಅಧಿಸೂಚನೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಅಧ್ಯಕ್ಷರಾಗಿ, ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಅರಂತೋಡಿನ ಬಿಜೆಪಿ ನಾಯಕಿ ಭಾರತಿ ಪುರುಷೋತ್ತಮ, ನ್ಯಾಯವಾದಿ ಜಗದೀಶ್ ಡಿ.ಪಿ. ಅವರನ್ನು ಸಮಿತಿಗೆ ನೇಮಿಸಿರುವ ಆದೇಶ ಪ್ರತಿ ಇದೆ.
ಸುಳ್ಯದಲ್ಲಿ ಬಿಜೆಪಿಗೆ ಒಲಿದ ಅಕ್ರಮ ಸಕ್ರಮ ಸಮಿತಿ ಸಾಮಾಜಿಕ ಈ ಆದೇಶ ಪ್ರತಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಇಲ್ಲಿನ ಕಾಂಗ್ರೆಸ್ ವಲಯದ ಮುಖಂಡರು ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಈ ಆದೇಶಕ್ಕೆ ತಡೆ ನೀಡಿ ಹೊಸ ಕಾಂಗ್ರೆಸ್ ಬೆಂಬಲಿತ ಹೊಸ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸುವಂತೆ ಮನವಿ ಮಾಡಿಕೊಂಡರು ಎಂದು ತಿಳಿದು ಬಂದಿದೆ.
ಸುಧೀರ್ ಕುಮಾರ್ ಶೆಟ್ಟಿ ಪ್ರತಿಕ್ರಿಯೆ:ಈ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರು, ''ಕ್ಷೇತ್ರದಲ್ಲಿ ಯಾವ ಪಕ್ಷದ ಶಾಸಕರಿದ್ದಾರೋ ಅವರು ಸಮಿತಿಗೆ ಅಧ್ಯಕ್ಷರಾಗಿರುತ್ತಾರೆ. ಯಾವ ಪಕ್ಷ ಆಡಳಿತದಲ್ಲಿರುತ್ತೋ ಆ ಪಕ್ಷದ ಬೆಂಬಲಿತರು ಸಮಿತಿಯ ಸದಸ್ಯರಾಗುತ್ತಾರೆ. ಒಂದು ವೇಳೆ, ಒಂದು ವಿಧಾನಸಭಾ ಕ್ಷೇತ್ರದಲ್ಲಿ ಎರಡು ಅಕ್ರಮ ಸಕ್ರಮ ಸಮಿತಿ ರಚನೆಯಾದರೆ, ಇನ್ನೊಂದಕ್ಕೆ ಸಹಾಯಕ ಕಮಿಷನರ್ ಅಧ್ಯಕ್ಷರಾಗಿರುತ್ತಾರೆ. ಅಕ್ರಮ ಸಕ್ರಮ ಸಮಿತಿಗೆ ಸದಸ್ಯರ ಹೆಸರುಗಳನ್ನು ಕಳುಹಿಸಿಕೊಡುವಂತೆ ಸರ್ಕಾರದಿಂದ ಆಯಾ ಭಾಗದ ಮುಖ್ಯ ತಾಲೂಕು ಅಧಿಕಾರಿಗಳಿಗೆ ಸುತ್ತೋಲೆ ಬರುತ್ತದೆ.
ಅದರಂತೆ ಸುಳ್ಯ, ಕಡಬ, ಪುತ್ತೂರು ಮತ್ತಿತರ ತಾಲೂಕುಗಳ ಅಧಿಕಾರಿಗಳಿಗೂ ಈ ಸುತ್ತೋಲೆ ಬಂದಿದ್ದು, ಕಡಬದ ಅಧಿಕಾರಿಗಳು ರಾಜಕೀಯ ಪ್ರೇರಿತರಾಗಿ ಶಾಸಕಿ ಭಾಗೀರಥಿ ಮುರುಳ್ಯ ಅವರೊಡನೆ ಸಮಾಲೋಚಿಸಿ, ಅವರು ಕೊಟ್ಟ ಹೆಸರುಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದಾರೆ. ನಾವು ಪಟ್ಟಿ ಕಳುಹಿಸುವಾಗ ತಡವಾಗಿತ್ತೆಂದು ಹೇಳಲಾಗಿದ್ದು, ಆದ್ರೆ ನಾವು ತಡ ಮಾಡಿಲ್ಲ'' ಎಂದು ಅವರು ಸ್ಪಷ್ಟನೆ ನೀಡಿದರು.
''ಸುಳ್ಯ ವಿಧಾನಸಭಾ ಕ್ಷೇತ್ರ ಅತೀ ದೊಡ್ಡ ಭೌಗೋಳಿಕ ಪ್ರದೇಶ. ಇಲ್ಲಿ ಕಡಬಕ್ಕೆ ಪ್ರತ್ಯೇಕ ಸಮಿತಿ ಸದಸ್ಯರು ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ವಲ್ಪ ವಿಳಂಬ ಆಗಿದೆ. ಆದರೆ ಅಧಿಕಾರಿಗಳ ಮಟ್ಟದಲ್ಲಿ ಕಳುಹಿಸಿದ ಪಟ್ಟಿ ಮಂಜೂರಾತಿಯಾಗಿ ಆದೇಶವಾಯಿತೆಂದು ಹೇಳಲಾಗುತ್ತಿದೆ. ಇದಕ್ಕೆ ತಡೆ ತರುತ್ತೇವೆ. ಆಯಾ ಜಿಲ್ಲೆಯ ಉಸ್ತುವಾರಿ ಸಚಿವರ ಮೂಲಕ ಪಟ್ಟಿ ತಯಾರಿಸಿ ಜಿಲ್ಲಾಧಿಕಾರಿಗಳ ಅನುಮೋದನೆಯೊಂದಿಗೆ ಪಟ್ಟಿ ಸರ್ಕಾರಕ್ಕೆ ಕಳುಹಿಸಬೇಕು. ಆದರೆ, ಇಲ್ಲಿ ಇದು ಪಾಲನೆ ಮಾಡದೇ ಶಾಸಕರ ಮತ್ತು ಅಧಿಕಾರಿಗಳ ಹಿತಾಸಕ್ತಿ ಮೇಲೆ ಸಲ್ಲಿಸಲಾಗಿದೆ. ಇದು ಸರಿಯಾದ ಪ್ರಕ್ರಿಯೆ ಅಲ್ಲ. ಕೂಡಲೇ ಬೇರೆ ಸಮಿತಿ ರಚನೆ ಮಾಡಲಾಗುತ್ತದೆ. ಈ ಬಗ್ಗೆ ಕಾರ್ಯಕರ್ತರಿಗೆ ಯಾವುದೇ ಗೊಂದಲ ಬೇಡ'' ಎಂದು ಸುಧೀರ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ:ಬರ ಘೋಷಣೆ: 161 ತೀವ್ರ, 34 ಸಾಧಾರಣ ಬರಪೀಡಿತ ತಾಲೂಕುಗಳು- ರಾಜ್ಯ ಸರ್ಕಾರ ಆದೇಶ