ಮಂಗಳೂರು (ದ.ಕ):ಕೊರೊನಾ ಹೆಸರಿನಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಡೆಸಲು ಹೊರಟಿದ್ದು, ಕೊರೊನಾ ಹೆಣದ ಮೇಲೆ ಹಣ ಮಾಡುತ್ತಿದೆ. ಸಿಎಂ ಸದಾ ಸಹಕಾರ ಕೊಡಿ ಎಂದು ಕೇಳುತ್ತಿರುತ್ತಾರೆ. ನಿಮಗೆ ದುಡ್ಡು ಲಂಚ ತಿನ್ನಲು ಸಹಕಾರ ನೀಡಬೇಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಗದ್ದುಗೆ ಏರಿದ ಬಳಿಕ ಮೊದಲ ಬಾರಿಗೆ ದ.ಕ ಜಿಲ್ಲೆಗೆ ಭೇಟಿ ನೀಡಿದ ಅವರು, ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದರು. ಕೊರೊನಾ ವಿಚಾರದಲ್ಲಿ ಪ್ರತಿಪಕ್ಷವಾಗಿ ಕಾಂಗ್ರೆಸ್ ಸದಾ ಬೆಂಬಲ ನೀಡುತ್ತಿದೆ. ಆದರೆ ಸರ್ಕಾರದ ಭ್ರಷ್ಟಾಚಾರಕ್ಕೆ ಬೆಂಬಲ ನೀಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಕೊರೊನಾ ವಿಚಾರಕ್ಕೆ 4 ಸಾವಿರ ಕೋಟಿ ರೂ. ಖರ್ಚು ಮಾಡಿ 2 ಸಾವಿರ ಕೋಟಿ ರೂ. ಲೂಟಿ ಮಾಡಿದೆ ಎಂದು ಆರೋಪಿಸಿರು.
ಕೊರೊನಾಕ್ಕಿಂತಲೂ ಬಿಜೆಪಿ ಭ್ರಷ್ಟಾಚಾರ ಭೀಕರ: ಡಿಕೆಶಿ ವಾಗ್ದಾಳಿ ಇದರ ಎಲ್ಲಾ ದಾಖಲೆಗಳನ್ನು ಜನರ ಮುಂದಿಡುತ್ತಿದ್ದು, ಕೊರೊನಾದಲ್ಲಿ ಭ್ರಷ್ಟಾಚಾರ ನಡೆಸಿರುವ ಬಿಜೆಪಿ ಸರ್ಕಾರದ ಸಂಸ್ಕಾರವನ್ನು ತಿಳಿಸಲು ಇದೀಗ ಬಂದಿದ್ದೇನೆ. ಸಾರ್ವಜನಿಕರ ಈ ಹಣದ ಬಗ್ಗೆ ಪಾರದರ್ಶಕ ತನಿಖೆಯಾಗಲಿ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕೆಲಸ ಸಂಪೂರ್ಣ ನಿಂತು ಹೋಗಿದೆ. ಸರ್ಕಾರಕ್ಕೆ ಬೇಕಾದವರ ಕೆಲಸಗಳು ಮಾತ್ರ ಆಗುತ್ತಿದೆ. ಕೊರೊನಾ ಕಿಟ್ ಖರೀದಿಯಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿದ್ದು, ಇದೇ ಕಿಟ್ಗಳನ್ನು ಖರೀದಿಸಿದ ಕೇಂದ್ರ ಸರ್ಕಾರ, ಪಕ್ಕದ ರಾಜ್ಯಗಳ ಹಾಗೂ ರಾಜ್ಯ ಸರ್ಕಾರದ ಲೆಕ್ಕಾಚಾರಕ್ಕೆ ತಾಳೆ ಹಾಕಿದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ ಎಂದರು.
ಕೇಂದ್ರ ಸರ್ಕಾರ 4 ಲಕ್ಷ ರೂ. ನೀಡಿ ವೆಂಟಿಲೇಟರ್ ಖರೀದಿ ಮಾಡಿದರೆ, ರಾಜ್ಯ ಸರ್ಕಾರ ಅದೇ ವೆಂಟಿಲೇಟರ್ಗೆ 18 ಲಕ್ಷ ರೂ. ನೀಡಿ ಖರೀದಿಸಿದೆ. 500-600 ರೂ. ಇರುವ ಆಕ್ಸಿ ಮೀಟರ್ಗೆ 1,500 ರೂ. ನೀಡಿ ಖರೀದಿಸಲಾಗಿದೆ.
ಥರ್ಮಲ್ ಸ್ಕ್ಯಾನರ್ಗೆ 2,500-4,000 ರೂ.ವರೆಗೆ ಹಣ ನೀಡಿ ಖರೀದಿಸಲಾಗಿದೆ. ಆದರೆ ನಾನು ಕಾಂಗ್ರೆಸ್ ಕಚೇರಿಗೆ 1,050 ರೂ. ನೀಡಿ ಖರೀದಿಸಿದ್ದೇನೆ. ಸ್ಯಾನಿಟೈಸರ್ ಅರ್ಧ ಲೀಟರ್ ಬಾಟಲಿಗೆ 100 ರೂ. ನೀಡಿ ಖರೀದಿಸಿದ್ದೇನೆ. ಆದರೆ ರಾಜ್ಯ ಸರ್ಕಾರದ ಲೆಕ್ಕದಲ್ಲಿ ಅದಕ್ಕೆ 600 ರೂ. ಇದೆ. ನಾನು ದಾಖಲೆ ಸಹಿತ ಮಾತನಾಡುತ್ತಿದ್ದು, ನೀವು ಬೇಕಾದರೆ ನನ್ನನ್ನು ಗಲ್ಲಿಗೇರಿಸಿ, ನನ್ನ ವಿರುದ್ಧ ಪ್ರಕರಣ ದಾಖಲಿಸಿ. ಇಲ್ಲಿಂದ ಹೋಗುವ ಮೊದಲು ನನ್ನನ್ನು ಬಂಧಿಸಲು ಅವಕಾಶ ನೀಡುತ್ತಿದ್ದೇನೆ. ಆದರೆ ಹಗರಣದ ಬಗ್ಗೆ ತನಿಖೆ ನಡೆಸಲು ಅವಕಾಶ ನೀಡಿ ಎಂದು ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.