ಕರ್ನಾಟಕ

karnataka

ETV Bharat / state

ಸುಳ್ಯದಲ್ಲಿ ಭಾಗೀರಥಿ ಮುರುಳ್ಯಗೆ ಭರ್ಜರಿ ಗೆಲುವು: 35 ವರ್ಷಗಳ ನಂತರ ಸುಳ್ಯಕ್ಕೆ ಮಹಿಳಾ ಶಾಸಕಿ - ಭಾಗೀರಥಿ ಮುರುಳ್ಯ ಭರ್ಜರಿ ಗೆಲುವು

ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಭರ್ಜರಿ ಗೆಲುವು ಸಾಧಿಸಿದ್ದು, ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

bjp
ಗೆಲುವಿನ ಸಂತಸ ಹಂಚಿಕೊಂಡ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ

By

Published : May 13, 2023, 1:16 PM IST

ಗೆಲುವಿನ ಸಂತಸ ಹಂಚಿಕೊಂಡ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ

ಸುಳ್ಯ (ದಕ್ಷಿಣ ಕನ್ನಡ):ವೃತ್ತಿಯಲ್ಲಿ ಟೈಲರಿಂಗ್, ಹೈನುಗಾರಿಕೆ, ಗೌರವ ಶಿಕ್ಷಕಿಯಾಗಿ ಕೆಲಸ ಮಾಡಿ, ಪ್ರಸ್ತುತ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯದಿಂದ ಸ್ಪರ್ಧಿಸಿ ಸುಮಾರು 35 ವರ್ಷಗಳ ನಂತರ ಇಂದು ಸುಳ್ಯ ಮೀಸಲು ಕ್ಷೇತ್ರದ ನೂತನ ಶಾಸಕಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಆಯ್ಕೆಯಾಗಿದ್ದಾರೆ.

ಸತತವಾಗಿ 35 ವರ್ಷಗಳಿಂದ ಬಿಜೆಪಿಯ ಹಿಡಿತದಲ್ಲಿರುವ ಸುಳ್ಯ ಮೀಸಲು ಕ್ಷೇತ್ರದಲ್ಲಿ ಈ ಸಲ ಎಸ್.ಅಂಗಾರ ಅವರನ್ನು ಬದಲಾವಣೆ ಮಾಡಿ ಹೊಸ ಮುಖಕ್ಕೆ ಟಿಕೆಟ್‌ ನೀಡಿದ್ದು, ಭಾಗೀರಥಿ ಮುರುಳ್ಯ ಅವರು ಈ ಅವಕಾಶ ಪಡೆದಿದ್ದರು. ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಗುರುವ ಮತ್ತು ಕೊರಗು ದಂಪತಿಯ ಪುತ್ರಿಯಾಗಿರುವ ಭಾಗೀರಥಿ ಅವರು ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸದ ಬಳಿಕ ಮಣಿಕ್ಕಾರ ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ನಾಲ್ಕು ವರ್ಷಗಳ ಕಾಲ ಗೌರವ ಶಿಕ್ಷಕಿಯಾಗಿ ಕಾರ್ಯವನ್ನು ನಿರ್ವಹಿಸಿದ್ದರು.

ಸದ್ಯ ಹೈನುಗಾರಿಕೆ, ಟೈಲರಿಂಗ್‌ ವೃತ್ತಿಯ ಮೂಲಕ ಸ್ವ - ಉದ್ಯೋಗವನ್ನು ಮಾಡುತ್ತಿದ್ದಾರೆ. ಈಗಲೂ ಮನೆಯ ಹೈನುಗಾರಿಕೆಯ ಕೆಲಸ ಇವರದ್ದೇ. ಪ್ರಸ್ತುತ ಮನೆಯಲ್ಲಿ ನಾಲ್ಕು ಹಸುಗಳಿದ್ದು, ಹತ್ತಿರದ ಹಾಲು ಸಂಗ್ರಹಣಾ ಕೇಂದ್ರಕ್ಕೆ ಹಾಲನ್ನು ಮಾರಾಟ ಮಾಡುತ್ತಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮಹಿಳಾ ವಿಭಾಗದ ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಥಮಿಕ ಶಿಕ್ಷಣ ಪಡೆದ ಭಾಗೀರಥಿ ಮುರುಳ್ಯ ಅವರು ಮಾಣಿಯಡ್ಕ ಶಿಶುಮಂದಿರದ ಸಂಚಾಲಕಿಯಾಗಿದ್ದರು. ಈಗ ಮುರುಳ್ಯ ರಾಷ್ಟ್ರ ಸೇವಿಕಾ ಸಮಿತಿ ಶಾಖೆಯ ಮುಖ್ಯ ಶಿಕ್ಷಕಿಯಾಗಿದ್ದಾರೆ.

ಇವರು 2000ರಲ್ಲಿ ಎಣ್ಮೂರು ತಾ.ಪಂ.ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುಳ್ಯ ತಾ.ಪಂ.ಸದಸ್ಯರಾಗಿದ್ದರು. 2005ರಲ್ಲಿ ಜಾಲ್ಸೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಗೆದ್ದು ದ.ಕ.ಜಿ.ಪಂ. ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ 3 ಅವಧಿಗಳಿಂದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಮಾತ್ರವಲ್ಲದೇ ಸುಳ್ಯ ಎಲ್‌.ಡಿ.ಬ್ಯಾಂಕ್‌ ನಿರ್ದೇಶಕರಾಗಿ, ಜನತಾ ಬಜಾರ್‌ನ ನಿರ್ದೇಶಕರಾಗಿ ದುಡಿದ ಅನುಭವ ಭಾಗೀರಥಿ ಅವರಿಗಿದೆ.

ಮುರುಳ್ಯ ಯುವತಿ ಮಂಡಲದ ಅಧ್ಯಕ್ಷೆಯಾಗಿ, ಯುವಜನ ಸಂಯುಕ್ತ ಸಹಕಾರಿ ಯೂನಿಯನ್‌ನ ಕೋಶಾಧಿಕಾರಿಯಾಗಿದ್ದರು. ಭಾಗೀರಥಿ ಅವರು ಧಾರ್ಮಿಕ ಕ್ಷೇತ್ರದಲ್ಲೂ ಸಕ್ರಿಯರು. ಮಾತ್ರವಲ್ಲದೆ ದ.ಕ.ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷೆಯಾಗಿ, ರಾಜ್ಯ ಎಸ್‌.ಸಿ.ಮೋರ್ಚಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು, ಪ್ರಸ್ತುತ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆಯಾಗಿ, ಕೊಡಗು ಮತ್ತು ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಭಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

ಅವಿವಾಹಿತರಾಗಿರುವ, 49 ವರ್ಷ ಪ್ರಾಯದ ಭಾಗೀರಥಿ ಅವರಿಗೆ ಮುತ್ತಪ್ಪ ಮತ್ತು ಸುಭಾಷ್‌ ಎಂಬ ಇಬ್ಬರು ಅಣ್ಣಂದಿರು ಮತ್ತು ಅಕ್ಕ ಲಲಿತಾ, ಹಾಗೂ ತಂಗಿ ಜಾನಕಿ ಮುರುಳ್ಯ ಗ್ರಾ.ಪಂ.ಅಧ್ಯಕ್ಷೆಯಾಗಿದ್ದಾರೆ. ಹಲವು ವರ್ಷದ ಹಿಂದೆ ಭಾಗೀರಥಿ ಅವರ ತಂದೆಯು ಊರಿನ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಬಳಿಕ ತಾಯಿಯೂ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಸಾಮಾನ್ಯ ಕಾರ್ಯಕರ್ತೆಯಾಗಿ ಬಾಲ್ಯದಿಂದಲೇ ನೋವು, ಕಷ್ಟ, ಅವಮಾನ ಅನುಭವಿಸಿ ಬೆಳೆದ ಬಂದ ಭಾಗೀರಥಿ ಮುರುಳ್ಯ ಅವರದ್ದು ಸಾಧು ಸ್ವಭಾವದ ವ್ಯಕ್ತಿತ್ವ. ಪ್ರಸ್ತುತ 35 ವರ್ಷಗಳ ನಂತರದಲ್ಲಿ ಸುಳ್ಯ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿ ಸುಳ್ಯ ಕ್ಷೇತ್ರದ ಶಾಸಕಿಯಾಗಿ ಭಾಗೀರಥಿ ಮುರುಳ್ಯ ಅವರು ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ:ಅಖಾಡದಲ್ಲಿ 184 ನಾರಿಯರು: ಖಾನಾಪುರದಲ್ಲಿ 39 ಸಾವಿರ ಮತದಿಂದ ಅಂಜಲಿ ನಿಂಬಾಳ್ಕರ್​ ಸೋಲು

ABOUT THE AUTHOR

...view details