ಮಂಗಳೂರು (ದಕ್ಷಿಣ ಕನ್ನಡ): ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್‌ಗೆ ಸಿದ್ದವಾಗಿದ್ದ ವಿಮಾನದ ರೆಕ್ಕೆಗೆ ಹಕ್ಕಿ ಡಿಕ್ಕಿ ಹೊಡೆದ ಘಟನೆ ಇಂದು ಬೆಳಗ್ಗೆ ನಡೆದಿದೆ. ದುಬೈಗೆ ಹೊರಟಿದ್ದ ಇಂಡಿಗೋ ವಿಮಾನ ಟೇಕಾಪ್ ವೇಳೆ ರನ್ ವೇನಲ್ಲಿಯೇ ಘಟನೆ ನಡೆಯಿತು ಎಂದು ತಿಳಿದುಬಂದಿದೆ.
ಬೆಳಗ್ಗೆ 8.15 ಕ್ಕೆ ಹೊರಟಿದ್ದ ವಿಮಾನವು ಟ್ಯಾಕ್ಸಿ ವೇ ದಾಟಿ ರನ್ವೇನಲ್ಲಿ ಸಾಗುತ್ತಿದ್ದಂತೆ ವಿಮಾನದ ರೆಕ್ಕೆಯ ಭಾಗಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆ. ಅಪಾಯದ ಸೂಚನೆ ಅರಿತ ಪೈಲೆಟ್ ಎಟಿಸಿಗೆ ಮಾಹಿತಿ ನೀಡಿದ್ದಾರೆ. ಟೇಕಾಫ್ ರದ್ದು ಮಾಡಿ ರನ್ ವೇನಿಂದ ವಿಮಾನ ವಾಪಸ್ ಬಂದಿದೆ. ಪ್ರಯಾಣಿಕರನ್ನು ಇಳಿಸಿ ವಿಮಾನದ ತಪಾಸಣೆ ನಡೆಸಲಾಗಿದೆ.
ಪ್ರಯಾಣಿಕರಿಗೆ ಬದಲಿ ವಿಮಾನ ವ್ಯವಸ್ಥೆ:ಬೆಂಗಳೂರಿನಿಂದ ಆಗಮಿಸಿದ ಮತ್ತೊಂದು ವಿಮಾನದ ಮೂಲಕ ಪ್ರಯಾಣಿಕರು ದುಬೈಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ. ಘಟನೆಯಿಂದ ಕೆಲ ಕಾಲ ಮಂಗಳೂರು ಏರ್ಪೋರ್ಟ್ನಲ್ಲಿ ಆತಂಕ ಉಂಟಾಗಿತ್ತು.
ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರತಿಕ್ರಿಯೆ:ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳುವ ಇಂಡಿಗೋ ವಿಮಾನ 6E 1467 IXE-DXB (8.25ಕ್ಕೆ ನಿರ್ಗಮನ) ಟ್ಯಾಕ್ಸಿ ವೇಯಿಂದ ರನ್‌ವೇಗೆ ಪ್ರವೇಶಿಸಿದಾಗ ಹಕ್ಕಿ ಡಿಕ್ಕಿ ಹೊಡೆದಿದೆ. ಪೈಲಟ್ ಎಟಿಸಿಗೆ ಮಾಹಿತಿ ನೀಡಿ ಬೆಳಗ್ಗೆ 8.30ಕ್ಕೆ ಏಪ್ರನ್‌ಗೆ ಮರಳಿದರು. ಸಂಪೂರ್ಣ ಇಂಜಿನಿಯರಿಂಗ್ ತಪಾಸಣೆಗಾಗಿ 160 ಸಿಬ್ಬಂದಿಯನ್ನು ಕೆಳಗಿಳಿಸಲಾಯಿತು. ವಿಮಾನವನ್ನು AOG (aircarft on ground) ವಿಮಾನ ಎಂದು ಘೋಷಿಸಲಾಯಿತು. ಪ್ರಯಾಣಿಕರಿಗೆ ಬೆಂಗಳೂರಿನಿಂದ ಆಗಮಿಸಿದ ಮತ್ತೊಂದು ಇಂಡಿಗೋ ವಿಮಾನದಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು. ಮರು ನಿಗದಿಯಾಗಿದ್ದ ದುಬೈ ವಿಮಾನ ಬೆಳಗ್ಗೆ 11.05ಕ್ಕೆ ಹೊರಟಿತು.
ಇಂಡಿಗೋ ವಿಮಾನ 6E 5347 (ಬೆಳಿಗ್ಗೆ 9.10ಕ್ಕೆ ನಿಗದಿತ ನಿರ್ಗಮನ) ಬೆಂಗಳೂರಿಗೆ ಹೊರಡಲು ನಿಗದಿಯಾಗಿದ್ದ 165 ಸಿಬ್ಬಂದಿಗೆ ಪರ್ಯಾಯ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ. ಮಾಧ್ಯಮದ ಒಂದು ವಿಭಾಗದಲ್ಲಿ ವರದಿ ಮಾಡಿದಂತೆ ಯಾವುದೇ ಭಯವಿಲ್ಲ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟಣೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ಸಚಿವ ಸಂಪುಟ ವಿಸ್ತರಣೆ ಕಸರತ್ತು: ದೆಹಲಿಗೆ ಪ್ರಯಾಣಿಸಿದ ಸಿಎಂ, ಡಿಸಿಎಂ