ಮಂಗಳೂರು: ಪ್ರಸ್ತುತ ಪ್ರತಿ ಕ್ಷೇತ್ರದಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಪ್ರತಿದಿನ ಯಾವುದಾದರೊಂದು ವಿಷಯಗಳ ಮೂಲಕ ಮಹಿಳಾ ಸಾಧಕಿಯರು ತಮ್ಮ ಪ್ರತಿಭೆ ಅನಾವರಣಗೊಳಿಸುತ್ತ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅದರಂತೆ ಬೈಕ್ನಲ್ಲೇ ದೇಶ-ವಿದೇಶ ಸುತ್ತಿ ನಾರಿ ಶಕ್ತಿ ಸಾಬೀತುಪಡಿಸಿದ್ದಾರೆ ಕಾಸರಗೋಡು ಮೂಲದ ಯುವತಿ ಅಮೃತಾ ಜೋಷಿ.
ಹೌದು, 21 ವರ್ಷ ವಯಸ್ಸಿನ ಅಮೃತಾ ಜೋಷಿ ಬೈಕ್ ಓಡಿಸುವುದನ್ನು ಕಲಿತು ಅದರಲ್ಲೇ ದೇಶ-ವಿದೇಶ ಸುತ್ತಿ ಬರುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆ ಕೇರಳ ಸೇರಿದಂತೆ ಇಡೀ ದೇಶಕ್ಕೆ ಮಾದರಿಯಾಗಿದೆ.
ಕೆನರಾ ಹೈಸ್ಕೂಲ್ಗೆ ಭೇಟಿ ನೀಡಿದ ಅಮೃತಾ ಜೋಷಿ ಬೈಕ್ ರೈಡಿಂಗ್ ಹವ್ಯಾಸ: ಇವರು ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯವರು. ಮಂಗಳೂರಿನ ಕೆನರಾ ಹೈಸ್ಕೂಲ್ನ ಹಳೇ ವಿದ್ಯಾರ್ಥಿನಿ ಕೂಡ ಹೌದು. ಇವರು ತಮ್ಮ ತಂದೆಯ ಇಚ್ಛೆಯಂತೆ ಬೈಕ್ ರೈಡಿಂಗ್ಅನ್ನು ಹವ್ಯಾಸ ಮಾಡಿಕೊಂಡಿದ್ದಾರೆ.
ಮಂಗಳೂರಿಗೆ ಭೇಟಿ: ನಾಲ್ಕು ತಿಂಗಳ ಹಿಂದೆ ಕೇರಳದ ಕ್ಯಾಲಿಕಟ್ನಿಂದ ತಮ್ಮ ಪಯಣ ಆರಂಭಿಸಿದ್ದರು. ಇದೀಗ 23 ಸಾವಿರ ಕಿ.ಮೀ ಸುತ್ತಿ ಬಂದು ತಮ್ಮ ಪಯಣವನ್ನು ಕೊನೆಗೊಳಿಸಿದ್ದಾರೆ. ಇಂದು ಮಂಗಳೂರಿನಲ್ಲಿ ತಾವು ಕಲಿತ ಡೊಂಗರಕೇರಿಯ ಕೆನರಾ ಹೈಸ್ಕೂಲ್ಗೆ ಭೇಟಿ ನೀಡಿದ್ದು, ಅವರನ್ನು ಗೌರವಯುತವಾಗಿ ಸ್ವಾಗತಿಸಲಾಯಿತು.
ಪಯಣ: ಅಮೃತಾ ಜೋಷಿ ಫೆ.4 ರಂದು ಕ್ಯಾಲಿಕಟ್ನಿಂದ ಪಯಣ ಆರಂಭಿಸಿದ್ದರು. ತಮಿಳುನಾಡು, ಆಂಧ್ರಪ್ರದೇಶ ಸುತ್ತಿದ ಬಳಿಕ ಈಶಾನ್ಯ ದೇಶಗಳಿಗೆ ತಲುಪಿದ್ದೆರು. ಚೀನಾ ಬಾರ್ಡರ್ ತವಾಂಗ್ನಲ್ಲಿ ಪಯಣ ಕೊನೆಗೊಳಿಸುವ ಗುರಿ ಹೊಂದಿದ್ದ ಅಮೃತಾ ಅಲ್ಲಿ ತಲುಪಿದ ಎಪ್ರಿಲ್ 8ರಂದು ಮತ್ತೆ ಪಯಣ ಮುಂದುವರಿಸುವ ನಿರ್ಧಾರ ಮಾಡಿದರು. ಅಲ್ಲಿಂದ ನೇಪಾಳ, ಮ್ಯಾನ್ಮಾರ್ ದೇಶಗಳಿಗೂ ತೆರಳಿದ್ದರು.
ಪಯಣದಲ್ಲಿ ಅಪಘಾತ:ಅಲ್ಲಿಂದ ವಾಪಸ್ ಬರುವ ವೇಳೆ ಉತ್ತರಪ್ರದೇಶದಲ್ಲಿ ರಸ್ತೆ ಅಪಘಾತಕ್ಕೀಡಾದರು. ಆ ವೇಳೆ ಕೆಟಿಎಂ ಬೈಕ್ ಸಂಪೂರ್ಣ ಹಾಳಾಗಿದೆ. ಅಮೃತಾ ಚಿಕಿತ್ಸೆ ಪಡೆದುಕೊಂಡು ವೈದ್ಯರ ಸಲಹೆಯಂತೆ ಒಂದು ತಿಂಗಳು ಊರಿಗೆ ಬಂದು ವಿಶ್ರಾಂತಿ ತೆಗೆದುಕೊಂಡ ನಂತರ ಮತ್ತೆ ಅಪಘಾತ ನಡೆದ ಸ್ಥಳಕ್ಕೆ ಬೇರೊಂದು ಬೈಕ್ ತೆಗೆದುಕೊಂಡು ಹೋಗಿ ಅಲ್ಲಿಂದ ಪಯಣ ಮುಂದುವರಿಸಿದ್ದರು. ಲಡಾಖ್, ಪಂಜಾಬ್, ರಾಜಸ್ಥಾನ ಜರ್ನಿ ಮುಗಿಸಿ ಇಂದು ಕರ್ನಾಟಕಕ್ಕೆ ಬಂದಿರುವ ಅಮೃತಾ ಅವರು ಇಂದೇ ಕೇರಳ ತಲುಪಿ ಪಯಣ ಕೊನೆಗೊಳಿಸಲಿದ್ದಾರೆ.
ಬೈಕ್ನಲ್ಲಿ ದೇಶ-ವಿದೇಶ ಸುತ್ತಿ ಬಂದ ಅಮೃತಾ ಜೋಷಿ ಕೆಟಿಎಂ, ಬಿಎಂಡಬ್ಲ್ಯು ಬೈಕ್ನಲ್ಲಿ ರೈಡ್:ಅಮೃತಾ ಅವರು ತಮ್ಮ ಪಯಣವನ್ನು ಕ್ಯಾಲಿಕೆಟ್ನಿಂದ ಆರಂಭಿಸಿದ್ದು ಕೆಟಿಎಂ ಬೈಕ್ನಲ್ಲಿ. ಈ ಬೈಕ್ ಉತ್ತರ ಪ್ರದೇಶದಲ್ಲಿ ನಡೆದ ಅಪಘಾತದಲ್ಲಿ ನುಜ್ಜುಗುಜ್ಜಾಗಿತ್ತು. ಬಳಿಕ ಹುಟ್ಟೂರಿಗೆ ಬಂದು ವಿಶ್ರಾಂತಿ ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ಅಮೃತಾ ತಮ್ಮ ಭಾವಿ ಪತಿ ನೀಡಿದ ಬಿಎಂಡಬ್ಲ್ಯು ಬೈಕನ್ನು ಅಪಘಾತ ನಡೆದ ಸ್ಥಳಕ್ಕೆ ತಲುಪಿಸಿ ಅಲ್ಲಿಂದ ಮತ್ತೆ ಪಯಣ ಆರಂಭಿಸಿದ್ದರು.
ಇದನ್ನೂ ಓದಿ:ವಿಶ್ವ ವಿಖ್ಯಾತ ಮೈಸೂರು ದಸರಾಗೆ ಆಗಮಿಸಿದ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ
ಪ್ರಾದೇಶಿಕ ಸಮಾನತೆ ಮತ್ತು ದೇಶದ ಸೈನಿಕರಿಗೆ ಗೌರವ ಕೊಡುವ ಉದ್ದೇಶದಿಂದ ಅಮೃತಾ ಈ ಪ್ರಯಾಣವನ್ನು ಮಾಡಿದ್ದಾರೆ. ಪಯಣದುದ್ದಕ್ಕೂ ಜನರು ಮನೆ ಮಗಳಂತೆ ಪ್ರೀತಿಯನ್ನು ತೋರ್ಪಡಿಸಿದ್ದರು. ಈ ಪಯಣ ನನಗೆ ಬಹಳ ಖುಷಿ ನೀಡಿದೆ ಎಂದು ಅಮೃತಾ ತಮ್ಮ ಅಭಿಪ್ರಾಯವನ್ನು 'ಈಟಿವಿ ಭಾರತ'ದೊಂದಿಗೆ ಹಂಚಿಕೊಂಡಿದ್ದಾರೆ.