ಪುತ್ತೂರು (ದಕ್ಷಿಣ ಕನ್ನಡ) :ತಾಲೂಕಿನ ಕೋಡಿಂಬಾಡಿ ಬಳಿ ಇಂದು ಬೆಳಗ್ಗೆ ದ್ವಿಚಕ್ರ ವಾಹನ ಸವಾರನೊಬ್ಬ ಪಾದಚಾರಿ ಮಹಿಳೆಗೆ ವಾಹನ ಹಾಯಿಸಿ ಪರಾರಿಯಾಗಿದ್ದ. ಇದಾದ ಕೆಲವೇ ಗಂಟೆಗಳಲ್ಲೇ ಕೋಡಿಂಬಾಡಿಯ ಗ್ರಾಮ ಪಂಚಾಯತ್ನ ಇಬ್ಬರು ನೂತನ ಸದಸ್ಯರು ಆ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ.
ಕೋಡಿಂಬಾಡಿ ಗ್ರಾಮದ ಸೇಡಿಯಾಪು ನಿವಾಸಿ ಲಕ್ಷ್ಮಿ ಎಂಬುವರು ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ವೇಳೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಗಾಯಗೊಂಡ ಲಕ್ಷ್ಮಿಯವರನ್ನು ಕೂಡಲೇ ಸ್ಥಳೀಯರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಮಹಿಳೆಗೆ ಡಿಕ್ಕಿ ಹೊಡೆದ ಆ್ಯಕ್ಟಿವಾ ಉಪ್ಪಿನಂಗಡಿ ಕಡೆಗೆ ಹೋಗಿದೆ ಎಂದು ಸ್ಥಳೀಯರು, ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಬದಿನಾರು ಹಾಗೂ ಜಗ್ಗನ್ನಾಥ ಶೆಟ್ಟಿ ನಡುಮನೆ ಅವರಿಗೆ ತಿಳಿಸಿದ್ದರು. ತಕ್ಷಣ ಕಾರ್ಯಾಚರಣೆಗಿಳಿದ ಗ್ರಾಪಂ ಸದಸ್ಯರು ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಬಳಿ ಆ್ಯಕ್ಟಿವಾವನ್ನು ಪತ್ತೆ ಹಚ್ಚಿದ್ದಾರೆ.
ಬಳಿಕ ವಾಹನ ಸವಾರನನ್ನು ವಿಚಾರಣೆ ನಡೆಸಿದಾಗ ಮೊದಲಿಗೆ ನಾನು ಯಾವುದೇ ಅಪಘಾತ ಮಾಡಿಲ್ಲವೆಂದು ವಾದಿಸಿದ್ದು, ಆ ಬಳಿಕ ಸತ್ಯ ಒಪ್ಪಿಕೊಂಡಿದ್ದಾನೆ. ಜೊತೆಗೆ ಆಸ್ಪತ್ರೆಯಲ್ಲಿರುವ ಮಹಿಳೆಯ ಚಿಕಿತ್ಸಾ ವೆಚ್ಚ ಭರಿಸುವುದಾಗಿ ತಿಳಿಸಿದ್ದಾನೆ. ದ್ವಿಚಕ್ರ ವಾಹನ ಸವಾರ ಕೊಡಿಪ್ಪಾಡಿಯ ವಿಷ್ಣುಮೂರ್ತಿ ಕಾರಂತ್ ಎಂಬ ಮಾಹಿತಿ ಲಭ್ಯವಾಗಿದ್ದು, ಇವರು ಅರ್ಚಕ ವೃತ್ತಿ ಮಾಡುತ್ತಿದ್ದಾರೆ.