ಸುಳ್ಯ (ದಕ್ಷಿಣ ಕನ್ನಡ):ಬೈಕ್ಗೆ ವ್ಯಾಗನರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಸೋಮವಾರ ನಡೆದಿದೆ. ಬೈಕ್ನಲ್ಲಿದ್ದ ಸವಾರರನ್ನು ಸ್ವರೂಪ್ ಮತ್ತು ಸಂಭ್ರಮ್ ಎಂದು ಗುರುತಿಸಲಾಗಿದೆ. ಸ್ವರೂಪ್ ಮೃತ ವಿದ್ಯಾರ್ಥಿಯಾಗಿದ್ದು, ಸಂಭ್ರಮ್‌ಗೆ ಗಾಯಗಳಾಗಿವೆ.
ಇವರಿಬ್ಬರು ಸುಳ್ಯದ ಆಯುರ್ವೇದ ಕಾಲೇಜಿನಲ್ಲಿ BAMS ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು. ಸುಳ್ಯದ ಜೂನಿಯರ್ ಕಾಲೇಜಿನ ಬಳಿಯಿರುವ ಹಾಸ್ಟೇಲ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ನಿನ್ನೆ ಕೆಟಿಎಂ ಡ್ಯೂಕ್ ಬೈಕ್ನಲ್ಲಿ ಸಂಭ್ರಮ್ ಮತ್ತು ಸ್ವರೂಪ್ ಸಂಪಾಜೆಗೆಂದು ಹೊರಟು ಮಾಣಿ- ಮೈಸೂರು ಹೆದ್ದಾರಿಯಲ್ಲಿ ಹೋಗುತ್ತಿದ್ದರು.
ಈ ವೇಳೆ ಸಂಜೆ ಸುಮಾರು 7.15 ಕ್ಕೆ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಪಾಲಡ್ಕ ಎಂಬಲ್ಲಿ ಸುಳ್ಯ ಕಡೆಗೆ ಬರುತ್ತಿದ್ದ ಕಾರೊಂದು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಸ್ವರೂಪ್ ಹಾಗು ಸಂಭ್ರಮ್ರಿದ್ದ ಬೈಕ್ನ ಬಲಬದಿಗೆ ಗುದ್ದಿದೆ. ಇದರ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಬೈಕ್ ಸಮೇತ ರಸ್ತೆಗೆ ಉರುಳಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಇಬ್ಬರನ್ನೂ ಉಪಚರಿಸಿದ್ದು, ಸಂಭ್ರಮ್ನ ಪಕ್ಕೆಲುಬಿಗೆ ತರಚಿದ ಗಾಯ ಮತ್ತು ಬಲಕೈಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಆದರೆ ಸ್ವರೂಪ್ನ ತಲೆಗೆ ಪೆಟ್ಟಾಗಿ ಪ್ರಜ್ಞೆ ತಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಕೂಡಲೇ ಅಲ್ಲಿಗೆ ಧಾವಿಸಿದ ವಿದ್ಯಾರ್ಥಿಗಳ ಸ್ನೇಹಿತರಾದ ಪ್ರಜ್ವಲ್, ಮನೋಜ್, ಅಜಯ್, ಜೀವನ್ ಎಂಬವರು ಅವರನ್ನು ಆಂಬ್ಯುಲೆನ್ಸ್ ಮೂಲಕ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರನ್ನು ಪರೀಕ್ಷಿಸಿದ ವೈದ್ಯರು ಸ್ವರೂಪ್ ಮೃತಪಟ್ಟಿರುವುದಾಗಿ ದೃಢಪಡಿಸಿದರು. ಗಾಯಗೊಂಡ ಸಂಭ್ರಮ್‌ಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಇನ್ನು ಅಪಘಾತವೆಸಗಿದ ಕಾರಿನ ಚಾಲಕನ ಹೆಸರು ಸತೀಶ್ ಎಂಬುದಾಗಿದ್ದು ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಾಲಿಸಲಾಗಿದೆ.
ಇದನ್ನೂ ಓದಿ:ದಾವಣಗೆರೆ: ಆಸ್ತಿ ವಿಚಾರಕ್ಕೆ ಅಕ್ಕನನ್ನೇ ಹತ್ಯೆ ಮಾಡಿದ ತಮ್ಮ
13 ವರ್ಷದ ಬಾಲಕನ ಮೇಲೆ ಟಿಪ್ಪರ್ ಹರಿದು ಅಪಘಾತ: ರಜೆ ಅರ್ಜಿಯನ್ನು ಶಾಲೆಗೆ ಸಲ್ಲಿಸಿ ಹಿಂತಿರುಗಿ ಬರುತ್ತಿದ್ದ 13 ವರ್ಷ ಬಾಲಕನ ಮೇಲೆ ಟಿಪ್ಪರ್ ಹರಿದಿತ್ತು. ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಂಜಾಬ್‌ನ ಕೈಲಾಶ್ ನಗರ ಚೌಕ್‌ದಲ್ಲಿ ನಡೆದಿತ್ತು. ಮೃತ ಬಾಲಕನ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಮೊದಲು ಹಾರ್ನ್ ಮಾಡಿದೆ. ಇದರಿಂದ ಗಾಬರಿಗೊಂಡು ಕೆಳಗೆ ಬಿದ್ದ ಬಾಲಕನ ಮೇಲೆಯೇ ಆರೋಪಿ ಚಾಲಕ ಟಿಪ್ಪರ್ ಅನ್ನು ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಘಟನೆ ಸಂಭವಿಸಿದ ತಕ್ಷಣವೇ ಸ್ಥಳೀಯರು ಸ್ಥಳಕ್ಕಾಗಮಿಸಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಬಾಲಕ ಅಷ್ಟರಲ್ಲೇ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ:ಚಿಕ್ಕಮಗಳೂರು: ಕಾಲುವೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಸೇರಿ ಮೂವರು ಸಾವು