ಮಂಗಳೂರು : 2012 ರಿಂದ 2022 ರವರೆಗೆ ನಗರದಿಂದ ವಿದೇಶಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದ ರಕ್ತಚಂದನವನ್ನು ಹರಾಜು ಮಾಡಲಾಗಿದೆ. ಈ ಮೌಲ್ಯವನ್ನು ಆನ್‌ಲೈನ್‌ನಲ್ಲಿ 3 ಪ್ರತಿಷ್ಠಿತ ಏಜೆನ್ಸಿಗಳು ಬರೋಬ್ಬರಿ 28 ಕೋಟಿ ರೂ.ಗೆ ಬಿಡ್ನಲ್ಲಿ ಖರೀದಿಸಿವೆ.
2012 ರಿಂದ 2023ರ ವರೆಗೆ ನಾಲ್ಕು ಪ್ರಕರಣಗಳಲ್ಲಿ ಮಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಸುಮಾರು 56.2 ಮೆಟ್ರಿಕ್ ಟನ್ ರಕ್ತಚಂದನವನ್ನು ಹರಾಜು ಹಾಕಲಾಗಿತ್ತು. ಮಂಗಳೂರು ಬಂದರಿನಿಂದ ಅಕ್ರಮವಾಗಿ ವಿದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ರಕ್ತಚಂದನ ಇದಾಗಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಅರಣ್ಯ ಇಲಾಖೆಯು ಆನ್‌ಲೈನ್ ಮೂಲಕ ಹರಾಜು ನಡೆಸಿದೆ.
ಒಟ್ಟು 2,094 ದಿಮ್ಮಿಗಳನ್ನೊಳಗೊಂಡ 56.2 ಮೆಟ್ರಿಕ್ ಟನ್ ರಕ್ತಚಂದನವನ್ನು ಏಜೆನ್ಸಿಗಳು ಹರಾಜಿನಲ್ಲಿ ಖರೀದಿಸಿವೆ. ಎ ಕೆಟಗರಿ 3 ಲಾಟ್, ಬಿ ಕೆಟಗರಿ 6 ಲಾಟ್, ಸಿ ಕೆಟಗರಿ 6 ಲಾಟ್, ಡಿ ಕೆಟಗರಿ 3 ಲಾಟ್ ಗಳಾಗಿ ವಿಂಗಡಣೆ ಮಾಡಲಾಗಿತ್ತು. ಒಟ್ಟು 18 ಲಾಟ್‌ಗಳಲ್ಲಿ ನ್ಯಾಚುರಲ್ ಕನ್ನೊಜೆನ್ಸಿ ಏಜೆನ್ಸಿಯು 10 ಲಾಟ್‌ಗೆ 14.5 ಕೋಟಿ ರೂ. ಬಿಡ್ ಮಾಡಿದ್ದು, ಯಮಾ ರಿಬನ್ಸ್ ಏಜೆನ್ಸಿಯು 4.2 ಕೋಟಿ ರೂ. ಬಿಡ್ ಜೊತೆಗೆ 3 ಲಾಟ್‌ಗೆ 1.6 ಕೋಟಿ ರೂ. ನೀಡಿ ಅಕ್ಷಾ ಏಜೆನ್ಸಿ ಖರೀದಿಸಿದೆ.ಮೂರು ಬಿಡ್‌ಗಳ ತೆರಿಗೆ ಸೇರಿ ಒಟ್ಟು ಮೊತ್ತ 28 ಕೋಟಿ ರೂ. ಆಗಿದೆ. ರಕ್ತಚಂದನಕ್ಕೆ ಚೀನಾ, ದುಬೈ, ಜಪಾನ್ ಸೇರಿದಂತೆ ಇತರೆ ದೇಶಗಳಲ್ಲಿ ಬೇಡಿಕೆಯಿದ್ದು, ಖರೀದಿ ಮಾಡಿದ ಕಂಪನಿ ಅಲ್ಲಿಗೆ ಇದನ್ನು ಸಾಗಣೆ ಮಾಡಲಿದೆ.