ಭಟ್ಕಳ:ಕೊರೊನಾ ಸೋಂಕನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಮೂರನೇ ಹಂತದ ಲಾಕ್ಡೌನ್ ಮುಂದುವರೆಸಿದೆ. ಸದ್ಯ ಹಳದಿ ವಲಯದಲ್ಲಿರುವ ಭಟ್ಕಳ ತಾಲೂಕಿನಲ್ಲಿ ಸರ್ಕಾರದ ಆದೇಶವನ್ನು ಜನರು ಪಾಲನೆ ಮಾಡದೆ ರಸ್ತೆಗಿಳಿದಿದ್ದಾರೆ. ಜನರನ್ನು ತಡೆದು ವಾಪಸ್ ಕಳುಹಿಸುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ.
ಲಾಕ್ಡೌನ್ ಮುಂದುವರಿಕೆಯ ಮಧ್ಯೆ ರಸ್ತೆಗಿಳಿದ ಭಟ್ಕಳದ ಜನತೆ ಭಟ್ಕಳದ ನಗರ ವ್ಯಾಪ್ತಿಯಲ್ಲಿ ಜನರ ಓಡಾಟ ಸೋಮವಾರ ಬೆಳಗ್ಗೆಯಿಂದಲೇ ಆರಂಭಗೊಂಡಿದೆ. ನಗರ ವ್ಯಾಪ್ತಿಯಲ್ಲಿ ಪಾಸ್ ಪಡೆಯದೆ ಮೊಬೈಲ್ ಶಾಪ್, ಹಳೇ ಬಸ್ ನಿಲ್ದಾಣದ ವ್ಯಾಪ್ತಿಯಲ್ಲಿ ಕೆಲವು ಬೇಕರಿ ಅಂಗಡಿಗಳು ಪೊಲೀಸರ ಭಯವಿಲ್ಲದೆ ತೆರೆದು ವ್ಯಾಪಾರಕ್ಕಿಳಿದಿವೆ. ತಾಲೂಕಾಡಳಿತ ಕಣ್ಣಿದ್ದೂ ಕುರುಡಾಗಿರುವ ಸ್ಥಿತಿಯಲ್ಲಿದೆ.
ಲಾಕ್ಡೌನ್ ಮುಂದುವರಿಕೆ ಮಧ್ಯೆ ರಸ್ತೆಗಿಳಿದ ಭಟ್ಕಳದ ಜನತೆ ಪಾಸ್ ಪಡೆಯಲು ಜನಸಂದಣಿ:
ಇನ್ನು ತಹಶೀಲ್ದಾರ್ ಕಚೇರಿಯ ಪಾಸ್ ವಿತರಣೆ ಕೇಂದ್ರದಲ್ಲಿ ನೂರಾರು ಮಂದಿ ಪಾಸ್ ಪಡೆಯಲು ಜಮಾಯಿಸಿದ್ದರು. ಕಚೇರಿಯಲ್ಲಿ ಲಾಕ್ಡೌನ್ ಪೂರ್ವದಲ್ಲಿ ಸೇರುತ್ತಿದ್ದ ಜನಸಂದಣಿಯೇ ಮುಂದುವರೆದಂತಿದೆ. ಈಗಾಗಲೇ ಅನಗತ್ಯವಾಗಿ ಕೆಲವರಿಗೆ ತಾಲೂಕಾಡಳಿತ ಪಾಸ್ ವಿತರಣೆ ಮಾಡಿದ್ದು, ಒಂದೇ ದಿನಸಿ ಅಂಗಡಿಗಳಿಗೆ 5-6 ಮಂದಿ ಪಾಸ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಲಾಕ್ಡೌನ್ ಮುಂದುವರಿಕೆ ಮಧ್ಯೆ ರಸ್ತೆಗಿಳಿದ ಭಟ್ಕಳದ ಜನತೆ ಸಂಶುದ್ದೀನ್ ಸರ್ಕಲ್ನಲ್ಲಿ ಪಾಸ್ ತಪಾಸಣೆ:
ಲಾಕ್ಡೌನ್ ಸಡಿಲಿಕೆ ಆಗಿದೆ ಎಂದು ಜನರು ತಪ್ಪು ಕಲ್ಪನೆಯಲ್ಲಿ ತಮ್ಮ ವಾಹನವನ್ನೇರಿ ಬೇಕಾಬಿಟ್ಟಿ ಓಡಾಟ ಮಾಡುತ್ತಿದ್ದಾರೆ. ಈ ಹಿನ್ನೆಲೆ ಡಿವೈಎಸ್ಪಿ ಗೌತಮ್ ಕೆ.ಸಿ. ಅವರಿಂದ ಅನಗತ್ಯ ವಾಹನ ಓಡಾಟ ಮಾಡುವವರ ಪರಿಶೀಲನೆ ಮಾಡಲಾಗುತ್ತಿದೆ. ಜನರಿಗೆ ಮತ್ತೆ ರಸ್ತೆಗಿಳಿಯದಂತೆ ಲಾಕ್ಡೌನ್ ವಿಸ್ತರಣೆ ಆಗಿರುವ ಬಗ್ಗೆ ಎಚ್ಚರಿಕೆಯ ಸೂಚನೆ ನೀಡಿದ್ದಾರೆ.