ಪುತ್ತೂರು:ಮಂಗಳೂರು ವಿಭಾಗದ ಭಜನಾ ಮಹಾಮಂಡಲ ಹಾಗೂ ಹುನುಮಗಿರಿ ಕ್ಷೇತ್ರದ ಸಂಯುಕ್ತಾಶ್ರಯದಲ್ಲಿ ಡಿ. 29ರಂದು ದ.ಕ, ಉಡುಪಿ, ಕೊಡಗು, ಕಾಸರಗೋಡು ಭಾಗದ ಸಾವಿರಕ್ಕೂ ಹೆಚ್ಚಿನ ಭಜನಾ ತಂಡಗಳ ಕೂಡುವಿಕೆಯೊಂದಿಗೆ ಭಜನಾ ಸಂಭ್ರಮ ಸಮಾವೇಶ ನಡೆಯಲಿದ್ದು, ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಿರ್ಮಿಸುವ ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ತಿಳಿಸಿದರು.
ಡಿ. 29ರಂದು ಭಜನಾ ಸಂಭ್ರಮ ಸಮಾವೇಶ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿಯುಳ್ಳ ಭಜನಾ ಮಂಡಳಿಗಳು ಒಂದೆಡೆ ಸೇರಿ ಸಮಾಜಮುಖಿ ಚಟುವಟಿಕೆಗಳಿಗೆ ಇನ್ನಷ್ಟು ಶಕ್ತಿ ತುಂಬುವ ಹಾಗೂ ಹೊಸ ಚಟುವಟಿಕೆಗಳ ಕುರಿತು ಸಂಕಲ್ಪ ಕೈಗೊಳ್ಳುವ ಹಿನ್ನೆಲೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಡಿ. 29 ರಂದು ಸಂಜೆ 6.12ಕ್ಕೆ ಶಂಖೋದ್ಘೋಷದೊಂದಿಗೆ ಸಮಾವೇಶ ಆರಂಭಗೊಳ್ಳಲಿದೆ. ಸಾವಿರಕ್ಕೂ ಹೆಚ್ಚಿನ ಭಜನಾ ಮಂಡಳಿಗಳ 5 ಸಾವಿರ ಕಾರ್ಯಕರ್ತರು ಭಜನಾಂಗಣದಲ್ಲಿಸಾವಿರ ದೀಪ ಹಾಗೂ 5 ಸಾವಿರ ಹಣತೆಗಳನ್ನು ಹಚ್ಚಿ ಏಕಕಾಲದಲ್ಲಿ ಆಯ್ದ 6 ಭಜನೆಗಳನ್ನು ಹಾಡುವ ಈ ಐತಿಹಾಸಿಕ ಕಾರ್ಯಕ್ರಮ 45 ನಿಮಿಷಗಳ ಕಾಲ ನಡೆಯಲಿದೆ. 1200ರಷ್ಟು ಭಜನಾ ಮಂಡಳಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. 20 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಂಜೆ 4.45ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೇಂದ್ರದ ಪಶುಸಂಗೋಪನಾ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಪ್ರತಾಪಚಂದ್ರ ಸಾರಂಗಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಕುಂದ ಪ್ರಧಾನ ಭಾಷಣ ಮಾಡುವರು. ಭಜನಾ ಸಂಭ್ರಮ ಸ್ವಾಗತ ಸಮಿತಿಯ ಅಧ್ಯಕ್ಷ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.