ಕರ್ನಾಟಕ

karnataka

ETV Bharat / state

ಮೋದಿಯವರ ಆದರ್ಶ ಗ್ರಾಮದ ಕನಸು ಸಾಕಾರ: ಕೇಂದ್ರ ಸಚಿವ ಭಗವಂತ್ ಖೂಬಾ

ಕಡಬ ತಾಲೂಕಿನ ಬಳ್ಪ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಆದರ್ಶ ಗ್ರಾಮ ಬಳ್ಪ ಗ್ರಾಮೋತ್ಸವ-2024 ಕಾರ್ಯಕ್ರಮವನ್ನು ಕೇಂದ್ರ ಸಚಿವ ಭಗವಂತ್​ ಖೂಬಾ ಉದ್ಘಾಟಿಸಿದರು.

Bhagwant Khooba inaugurated the program of Adarsh Gram Balpa Gramotsava-2024
ಆದರ್ಶ ಗ್ರಾಮ ಬಳ್ಪ ಗ್ರಾಮೋತ್ಸವ-2024 ಕಾರ್ಯಕ್ರಮ ಉದ್ಘಾಟಿಸಿದ ಭಗವಂತ್​ ಖೂಬಾ

By ETV Bharat Karnataka Team

Published : Jan 11, 2024, 11:35 AM IST

ಕಡಬ(ದಕ್ಷಿಣ ಕನ್ನಡ):ದೇಶದ ಸಮಗ್ರ ಅಭಿವೃದ್ಧಿಯ ಕಲ್ಪನೆ, ಸರ್ವ ಜನರ ವಿಕಾಸದ ಕನಸು ಹಾಗು ಮಾದರಿ ಅಭಿವೃದ್ಧಿ ಕಾರ್ಯಗಳಿಂದ ನರೇಂದ್ರ ಮೋದಿಯವರ ಆದರ್ಶ ಗ್ರಾಮದ ಕನಸು ಸಾಕಾರಗೊಂಡಿದೆ ಎಂದು ಕೇಂದ್ರ ಸಚಿವ ಭಗವಂತ್ ಖೂಬಾ ಹೇಳಿದ್ದಾರೆ.

ಗ್ರಾಮವಿಕಾಸ ಪ್ರತಿಷ್ಠಾನ ಬಳ್ಪ-ಕೇನ್ಯ ಗ್ರಾಮ ಉತ್ಸವ ಸಮಿತಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಆದರ್ಶ ಗ್ರಾಮವಾಗಿ ಆಯ್ಕೆ ಮಾಡಿದ ಕಡಬ ತಾಲೂಕಿನ ಬಳ್ಪ ಸ.ಹಿ.ಪ್ರಾ. ಶಾಲಾ ಆವರಣದಲ್ಲಿ, ಸಂಸದರ ಆದರ್ಶ ಗ್ರಾಮ ಬಳ್ಪ ಗ್ರಾಮೋತ್ಸವ-2024 ಕಾರ್ಯಕ್ರಮ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.

"ಸಂಸದರಿಗೆ ಮಾತ್ರವಲ್ಲ, ಜನಸೇವೆ, ಅಭಿವೃದ್ಧಿಯ ಕಳಕಳಿ ಇರುವ ಎಲ್ಲಾ ಜನಪ್ರತಿನಿಧಿಗಳಿಗೂ ಆದರ್ಶ ಗ್ರಾಮ ಕಲ್ಪನೆ ಒಂದು ಮಾದರಿಯಾಗಬೇಕು. ಕಲ್ಪನೆಗೂ ಮೀರಿದ ಅಭಿವೃದ್ಧಿಯ ಮೂಲಕ ಬಳ್ಪ ಗ್ರಾಮವು ದೇಶಕ್ಕೆ ಮಾದರಿಯಾಗಿದೆ. ಸಮಾಜದ ಸರ್ವತೋಮುಖ ಅಭಿವೃದ್ಧಿ ಆಗಬೇಕು. ಧರ್ಮರಹಿತ, ಜಾತಿರಹಿತ, ಲಿಂಗಭೇದ ರಹಿತವಾಗಿ ಯುವಜನತೆ, ಮಹಿಳೆಯರ ಅಭಿವೃದ್ಧಿಯಾಗಬೇಕು ಎಂದು ಕನಸು ಕಂಡವರು ನರೇಂದ್ರ ಮೋದಿ. ವಿಶ್ವ ನಾಯಕನಾಗಿ ಬೆಳೆದ ಮೋದಿ ತಮ್ಮ ಆಡಳಿತದಲ್ಲಿ ಬಡವರಿಗೆ ಸೌಲಭ್ಯಗಳು ನೇರವಾಗಿ ತಲುಪಿಸಿ ಬಡವರ ಬದುಕನ್ನು ಹಸನುಗೊಳಿಸಿದ್ದಾರೆ. ದೇಶದ 13 ಕೋಟಿ ಬಡವರ ಬದುಕು ಉತ್ತಮವಾಗಿದೆ" ಎಂದು ಅವರು ಹೇಳಿದರು.

ಬಿಜೆಪಿ ಸಭೆಯಿಂದ ಸಚಿವ ಭಗವಂತ ಖೂಬಾ ಹೊರನಡೆದ ವಿಚಾರದ ಬಗ್ಗೆ ಮಾತನಾಡಿ, "ಅದು ಸತ್ಯಕ್ಕೆ ದೂರವಾದ ಮಾತು. ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ನಾನು ನೋಡಿದೆ. ಆ ಸಭೆಯಲ್ಲಿ ಪ್ರತಿ ಲೋಕಸಭಾ ಕ್ಷೇತ್ರದ ಸ್ಥಿತಿಗತಿ ಹಾಗೂ ವಿಚಾರಗಳು ಚರ್ಚೆ ಆಗಿದೆ. ಅಲ್ಲಿ ವಿರೋಧ ಪಕ್ಷದ ಚಟುವಟಿಕೆಗಳ ಬಗ್ಗೆ ಮತ್ತು ಲೋಕಸಭಾ ಸಿದ್ಧತಾ ಸಭೆ ನಡೆದಿದೆಯೇ ಹೊರತು ಅಲ್ಲಿ ಯಾರ ಪರ-ವಿರೋಧ ಅಭಿಪ್ರಾಯದ ಸಭೆ, ಚರ್ಚೆ ನಡೆದಿಲ್ಲ. ಕೇಂದ್ರದವರು ಅನೇಕ ಆಯಾಮ ಮತ್ತು ಮಾನದಂಡಗಳಲ್ಲಿ ಟಿಕೆಟ್ ಹಂಚಿಕೆ ಮಾಡುತ್ತಾರೆ. ಅದು ಬಿಟ್ಟು ಅಂತಹ ಯಾವುದೇ ಘಟನೆ ನಡೆದಿಲ್ಲ, ಅದು ಸತ್ಯಕ್ಕೆ ದೂರವಾಗಿದೆ. ನಿನ್ನೆ ರಾತ್ರಿ ಬಂದ ನನ್ನ ಟಿಪಿ (ಟೆಸ್ಟ್​ ಪ್ರೊಟೋಕಾಲ್​) ನೋಡಿ, ಅದರಲ್ಲಿ 12 ಗಂಟೆಗೆ ಹೊರಡಬೇಕು ಅಂತ ಇತ್ತು. ನಾನು ರಾಜ್ಯಾಧ್ಯಕ್ಷರ ಅನುಮತಿ ಕೇಳಿಯೇ ಹೊರಗೆ ಬಂದಿದ್ದೇನೆ. ಸಂಜೆ 5 ಗಂಟೆ ಹೊತ್ತಿಗೆ ಕಡಬದ ಬಳ್ಪದ ಕಾರ್ಯಕ್ರಮಕ್ಕೆ ಬರಬೇಕಿತ್ತು. ಇದನ್ನು ಒಂದು ತಿಂಗಳ ಹಿಂದೆಯೇ ನಾನು ಒಪ್ಪಿಕೊಂಡಿದ್ದೇನೆ. ಹೀಗಾಗಿ ಬೀದರ್ ಮತ್ತು ಕಲಬುರ್ಗಿ ಚರ್ಚೆ ಮುಗಿಸಿ ಹೊರ ಬಂದೆ. ಭಿನ್ನಾಭಿಪ್ರಾಯ ಇರಬಹುದು. ಪಕ್ಷದಲ್ಲಿ ಎಲ್ಲರನ್ನೂ ಕೂಡಿಸುವ ಒಂದು ವ್ಯವಸ್ಥೆ ಇರುತ್ತೆ. ಯಾರ ಅಸಮಾಧಾನವೂ ಪಕ್ಷದಲ್ಲಿ ಕೆಲಸಕ್ಕೆ ಬರುವುದಿಲ್ಲ. ತಮ್ಮ ಅಭಿಪ್ರಾಯ ಕೇಳಿದಾಗ ಹೇಳುವ ವ್ಯವಸ್ಥೆ ಪಕ್ಷದಲ್ಲಿ ಇದೆ. ಹೀಗಾಗಿ ಇಂಥದ್ದರಲ್ಲಿ ಅಸಮಾಧಾನಕ್ಕೆ ಯಾವುದೇ ಆಸ್ಪದ ಇಲ್ಲ" ಎಂದರು.

ಶ್ರೀ ಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, "ಕೃಷಿ ಮತ್ತು ಋಷಿ ಪ್ರಧಾನವಾಗಿರುವ ಕಡೆ ಬೆಳವಣಿಗೆ ಆಗುತ್ತದೆ. ಇಂದು ಜಾಗತೀಕರಣದ ಜೊತೆಗೆ ಭಾರತೀಯತೆ ಬೆಳೆಯಬೇಕು. ಆಗ ಮಾತ್ರ ನಮ್ಮತನ ಉಳಿಯುತ್ತದೆ. ಭಾರತೀಯತೆ ಇದ್ದಲ್ಲಿ ಆಧ್ಯಾತ್ಮಿಕತೆ ಇರುತ್ತದೆ ರಾಷ್ಟ್ರ ಎಂದರೆ ರಾಮ, ರಾಮ ಎಂದರೆ ರಾಷ್ಟ್ರ ಎಂದ ಅವರು ಬಳ್ಪ ಗ್ರಾಮದಲ್ಲಿ ಆದರ್ಶದ ಬೆಳಕು ಮೂಡಿದೆ" ಎಂದು ತಿಳಿಸಿದರು.

ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, "ಭಾರತವು 3ನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ರಾಜ್ಯದ ಮಾದರಿ ಗ್ರಾಮ ಪಂಚಾಯತ್ ಬಳ್ಪ ಎಂದ ಅವರು ಶಿರಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಂಗ ಮಾರ್ಗ ನಳಿನ್‌ ಕುಮಾ‌ರ್ ಕಟೀಲ್ ಅವಧಿಯಲ್ಲಿಯೇ ಅಗಬೇಕು" ಎಂದರು.

ಮಾಜಿ ಸಚಿವ ಎಸ್.ಅಂಗಾರ ಮಾತನಾಡುತ್ತಾ, "ಆದರ್ಶ ಎಂಬುದು ಪ್ರಚಾರದ ವಸ್ತುವಾಗಿರಬಾರದು. ಅದು ನಮ್ಮ ನಡೆ, ನುಡಿಯಲ್ಲಿ ಬದುಕಿನಲ್ಲಿ ಇರಬೇಕು. ನಮ್ಮ ಕೆಲಸದ ಮೂಲಕ ಆದರ್ಶರಾಗಬೇಕು" ಎಂದರು.

ನಳಿನ್ ಕುಮಾರ್ ಕಟೀಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್‌ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಮ್ ಸುಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಭಾಗವಹಿಸಿದ್ದರು.

ಬಳ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜ, ಬಳ್ಪ-ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಳಲೆ, ಬಳ್ಪ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್‌ ಬುಡೆಂಗಿ, ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ರೈ ಬಿರ್ಕಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಸಚಿವ ಭಗವಂತ್ ಖೂಬಾ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ:ಲೋಕಸಭೆ ಚುನಾವಣೆಗೆ ಪೂರ್ವಸಿದ್ಧತೆ: ದೆಹಲಿಯಲ್ಲಿ ಜಿಲ್ಲಾ ಉಸ್ತುವಾರಿಗಳ ಸಭೆ

ABOUT THE AUTHOR

...view details