ಮಂಗಳೂರು : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರು ಸಮೀಪದ ಕಾಡಿಗೆ ತೆರಳಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಬ್ರಹ್ಮಣ್ಯದ ದೇವರಗದ್ದೆ ಬಳಿ ನಡೆದಿದೆ. ಬೆಂಗಳೂರಿನ ನೆಲಮಂಗಲ ಮೂಲದ ಗಂಗಮ್ಮ ಲಕ್ಷ್ಮಮ್ಮ (60) ಎಂಬವರು ಆತ್ಮಹತ್ಯೆಗೆ ಶರಣಾದ ಮಹಿಳೆ.
ಇವರು ಎರಡು ಮೂರು ದಿನಗಳ ಹಿಂದೆಯೇ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸುಬ್ರಹ್ಮಣ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹದ ಬಳಿ ಇದ್ದ ಮೊಬೈಲ್ ಮೂಲಕ ಕುಟುಂಬದವರ ವಿಳಾಸ ಪತ್ತೆ ಮಾಡಿ ಮಾಹಿತಿಯನ್ನು ರವಾನಿಸಲಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ವ್ಯಕ್ತಿ ಆತ್ಮಹತ್ಯೆ: ಆಸ್ಪತ್ರೆಗೆ ದಾಖಲಾಗಿದ್ದವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ದಿವಾಕರ್ (36) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.
ಮೃತ ದಿವಾಕರ್ ಅವರು ಕಳೆದ ಜೂನ್ 30ರಂದು ಅತಿಯಾಗಿ ಮದ್ಯ ಸೇವಿಸಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಇಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರ ವೆನ್ಲಾಕ್ ಆಸ್ಪತ್ರೆಯ ನೂತನ ಕಟ್ಟಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತನ ಸಹೋದರ ಚಂದ್ರಶೇಖರ್ ದಕ್ಷಿಣ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.