ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಈಗಾಗಲೇ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ತಾಲೂಕಿನಲ್ಲಿ ಮತದಾರರ ಮನ ಗೆದ್ದಿದ್ದಾರೆ. ಪಟ್ಟಣ ಪಂಚಾಯತ್ ಮುಂದಿನ 5 ವರ್ಷಗಳಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿದೆ. ಈ ಮೂಲಕ ರಾಜ್ಯದಲ್ಲೇ ಮಾದರಿಯಾದ ಪಟ್ಟಣ ಪಂಚಾಯತ್ ಆಗಿ ಈ ಪಂಚಾಯತನ್ನು ರೂಪುಗೊಳಿಸಲು ಬಿಜೆಪಿ ಉತ್ಸುಕವಾಗಿದೆ. ನಾನು ಹಾಗೂ ಶಾಸಕರು ಜೊತೆ ಸೇರಿ ಅಭಿವೃದ್ಧಿ ಕಾರ್ಯದಲ್ಲಿ ಸಂಪೂರ್ಣವಾಗಿ ಪಟ್ಟಣ ಪಂಚಾಯತ್‍ಗೆ ಸಹಕಾರ ನೀಡಲಿದ್ದೇವೆ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದರು. .
ಅವರು ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ವಿಜೇತರಾದ ಅಧ್ಯಕ್ಷೆ ರಜನಿ ಕುಡ್ವ ಹಾಗೂ ಉಪಾಧ್ಯಕ್ಷ ಜಯಾನಂದ ಗೌಡ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಶಾಸಕರ ಅಭಿವೃದ್ಧಿ ಕಾರ್ಯ ಹಾಗೂ ಕಾರ್ಯವೈಖರಿಯನ್ನು ಗಮನಿಸಿ ಜನ ಆಶೀರ್ವಾದ ಮಾಡಿದ್ದಾರೆ. ಶಾಸಕರ ಆಯ್ಕೆಯಾದ ಒಂದು ವರ್ಷದೊಳಗಾಗಿ ಈ ಪ.ಪಂ. ಚುನಾವಣೆ ನಡೆದಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ನಡೆಯುತ್ತದೆ ಎಂದು ಜನತೆ ಮತದಾನ ಮಾಡಿದರು. ಮೊತ್ತ ಮೊದಲ ಬಾರಿಗೆ ಈ ಪ.ಪಂ.ನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವುದು ಸಂತಸ ತಂದಿದೆ. ಅಭಿವೃದ್ಧಿ ಪರವಾದ ಆಡಳಿತವನ್ನು ನಾವು ಕೊಡುತ್ತೇವೆ ಎಂದರು.
ನಂತರ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಇತಿಹಾಸದಲ್ಲಿ ಬಿಜೆಪಿ ಸ್ವತಂತ್ರವಾಗಿ ನ.ಪಂ. ಅಧ್ಯಕ್ಷ ಸ್ಥಾನ ಲಭಿಸಿದೆ. ಎರಡು ವರ್ಷಗಳಿಂದ ಅಧಿಕಾರ ಇಲ್ಲದಿದ್ದರೂ ಅಧಿಕಾರಿಗಳ ಜೊತೆಗೂಡಿ ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸಲಾಗಿತ್ತು. ಇದೀಗ ಅಧಿಕಾರ ಲಭಿಸಿದೆ, ಹಲವಾರು ಯೋಜನೆಗಳನ್ನು ರೂಪಿಸಿ ಪಟ್ಟಣ ಇನ್ನಷ್ಟು ಅಭಿವೃದ್ಧಿ ಹೊಂದಲು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಶ್ರಮಿಸಲಿದ್ದಾರೆ. ಅದೇ ರೀತಿ ಪಟ್ಟಣದ ಜನತೆಯ ಸಮಸ್ಯೆಗಳಿಗೂ ಸೂಕ್ತ ಹಾಗೂ ಸಕಾಲದಲ್ಲಿ ಸ್ಪಂದಿಸುವ ಮೂಲಕ ಜನಪರ ಆಡಳಿತ ತಾಲೂಕಿನಲ್ಲಿ ನೀಡಲಾಗುವುದು ಎಂದರು.