ಬೆಳ್ತಂಗಡಿ:ಗಣಿತ ಪಾಠ ಕೆಲವು ಮಕ್ಕಳಿಗೆ ತುಂಬಾ ಕಷ್ಟಕರ ಎನಿಸುವುದು ಸಹಜ. ಹಾಗಾಗಿ ಕೆಲವು ಮಕ್ಕಳು ಶಾಲೆಗೆ ಹೋಗುವುದಕ್ಕೆ ಹಿಂಜರಿಯುತ್ತಾರೆ. ಅದರೆ ಗಣಿತ ಪಾಠ ಕಬ್ಬಿಣದ ಕಡಲೆಯಲ್ಲ ಎಂಬುವುದನ್ನು ಇಲ್ಲೊಬ್ಬ ಶಿಕ್ಷಕ ತೋರಿಸಿಕೊಟ್ಟು ಶಿಕ್ಷಕ ವೃತ್ತಿ ಎನ್ನುವುದು ಕೇವಲ ಕರಿ ಹಲಗೆಯ ಬರಹಗಳಿಗೆ ಮಾತ್ರ ಸೀಮಿತವಲ್ಲ ಎಂಬ ಕಲ್ಪನೆಯನ್ನು ಸಾಕಾರಗೊಳಿಸಿ ಇತರ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕು ನಡ ಎಂಬ ಗ್ರಾಮೀಣ ಪ್ರದೇಶದ ಸರ್ಕಾರಿ ಪ್ರೌಢ ಶಾಲೆಯ ಗಣಿತ ಶಿಕ್ಷಕ ಯಾಕೂಬ್ ದಾನಿಗಳ ಸಹಕಾರದಿಂದ ಮಕ್ಕಳಿಗಾಗಿ ರಾತ್ರಿ, ಹಗಲು ದುಡಿದು ಹಲವು ನೋವುಗಳನ್ನು ತಿಂದು ತಮ್ಮ ಕನಸಿನ ಗಣಿತ ಲೋಕ ಎಂಬ ಗಣಿತ ಪ್ರಯೋಗ ಶಾಲೆಯನ್ನು ಸ್ಥಾಪಿಸಿ ಇಡೀ ದೇಶಕ್ಕೆ ಮಾದರಿಯಾಗುವಂತಹ ಕೆಲಸ ಮಾಡಿದ್ದಾರೆ. ತಮ್ಮ ಈ ಸಾಧನೆಯಿಂದ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಿಕ್ಷಣ ಇಲಾಖೆಯಿಂದ ರಾಜ್ಯದಲ್ಲಿ ಆಯ್ಕೆಯಾದ ಇಬ್ಬರಲ್ಲಿ ಯಾಕೂಬ್ ಕೂಡ ಒಬ್ಬರಾಗಿದ್ದಾರೆ. ಗಣಿತ ಲೋಕದಲ್ಲಿ ಪ್ರಾಯೋಗಿಕ ಪ್ರವೃತ್ತಿಗೆ ಮುಂದಾಗಿ ಸಾವಿರಾರು ಕುತೂಹಲಕಾರಿ ಮನಸ್ಸುಗಳಿಗೆ ಸ್ಪಷ್ಟ ಉತ್ತರ ದೊರಕಿಸುವಲ್ಲಿ ರಾತ್ರಿ ಹಗಲು ಪ್ರಯತ್ನ ಪಟ್ಟ ಫಲಕ್ಕೆ ಇಂದು ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ತಾನು ಮಾಡಿದ ಪ್ರತಿಯೊಂದು ಕಾರ್ಯಗಳೂ ಶಿಕ್ಷಕ ಸಮುದಾಯಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಸುಲಭದಲ್ಲಿ ದೊರಕುವಂತೆ ಮಾಡಿರುವ ಇವರ ಪ್ರಯತ್ನ ಶ್ಲಾಘನೀಯ.
ಗಣಿತ ಶಿಕ್ಷಕ ಯಾಕೂಬ್ಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಕೊಯ್ಯೂರು ಎಂಬ ಕುಗ್ರಾಮ ಉಣ್ಣಾಲು ಬಡ ಕುಟುಂಬದ ಇಸುಬು ಬ್ಯಾರಿ ಮತ್ತು ಅಲಿಯಮ್ಮ ಎಂಬ ದಂಪತಿಯ ಏಳು ಮಕ್ಕಳಲ್ಲಿ ನಾಲ್ಕನೇಯವರಾಗಿ ಜನಿಸಿದ ಇವರು, ಎಸ್ಡಿಎಂ ಸಂಸ್ಥೆಯಲ್ಲಿ ತಮ್ಮ ಪದವಿ ಮುಗಿಸಿದರು. ನಂತರ ವಿವಿಧ ಕೋರ್ಸ್ಗಳನ್ನು ಮುಗಿಸಿ 1996ರಲ್ಲಿ ನಡ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿದರು. ಶಾಲೆಯ ಬೆಳ್ಳಿಹಬ್ಬದ ನೆನಪಿಗಾಗಿ 2015ರಲ್ಲಿ ಯಾಕೂಬ್ ಅವರು ಎಲ್ಲರ ಸಹಕಾರದಿಂದ ನಿರ್ಮಿಸಿದ "ಗಣಿತ ಲೋಕ" ಎಂಬ ಗಣಿತ ಪ್ರಯೋಗ ಶಾಲೆ ವಿಶಿಷ್ಟ ರೀತಿಯಲ್ಲಿ ತಮ್ಮ ಕಲ್ಪನೆಯಂತೆ ತಮ್ಮ ಹಳೆಯ ವಿದ್ಯಾರ್ಥಿಗಳ ಹಾಗೂ ಹಲವು ದಾನಿಗಳ ಸಹಕಾರದಿಂದ ನಿರ್ಮಿಸಿ ಇಡೀ ರಾಜ್ಯಕ್ಕೆ ನಡ ಎಂಬ ಸರ್ಕಾರಿ ಪ್ರೌಢ ಶಾಲೆಯ ಹೆಸರನ್ನು ಪಸರಿಸಿ ಈ ಪ್ರಯೋಗ ಶಾಲೆಯನ್ನು ರಾಜ್ಯದ ಸಾವಿರಾರು ಶಿಕ್ಷಕರು ಹಾಗೂ ಮಕ್ಕಳ ಪ್ರವಾಸಿ ತಾಣವನ್ನಾಗಿಸಿದ್ದಾರೆ. ಅವರು ಹೇಳುವಂತೆ ಇಷ್ಟರವರೆಗೆ ಸುಮಾರು 30 ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಈ ಗಣಿತ ಪ್ರಯೋಗ ಶಾಲೆಗೆ ಭೇಟಿ ನೀಡಿ ವೀಕ್ಷಿಸಿದ್ದಾರೆ. ಹಲವು ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿವೆ. 2016ರಲ್ಲಿ ದಕ್ಷಿಣ ಕನ್ನಡದ ಅತ್ಯುತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಗಣಿತ ಕಷ್ಟ ಅಲ್ಲ, ಅದು ನಮಗೆ ಇಷ್ಟ ಎಂಬ ಭಾವನೆ ಮಕ್ಕಳ ಮನಸ್ಸಿನಲ್ಲಿ ಮೂಡಬೇಕು ಎಂಬ ದೊಡ್ಡ ಕಲ್ಪನೆಯಲ್ಲಿ ಇದ್ದ ನಾನು ಈ ಗಣಿತ ಪ್ರಯೋಗಾಲಯ ಸ್ಥಾಪಿಸಲು ಕಾರಣವಾಯಿತು. ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದು ತುಂಬಾ ಸಂತೋಷವಾಗುತ್ತಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಜನ ಗುರುತಿಸುತ್ತಾರೆ ತಕ್ಕ ಪ್ರತಿಫಲ ದೇವರು ಕೊಡುತ್ತಾನೆ ಎಂಬುವುದಕ್ಕೆ ನಾನೇ ಉದಾಹರಣೆ ಎಂದಿದ್ದಾರೆ. ಶಾಸಕರು ಹಾಗೂ ಇನ್ನಿತರರ ಸಹಕಾರದಿಂದ ಈ ಪ್ರಶಸ್ತಿ ಸಿಗಲು ಕಾರಣವಾಯ್ತು. ಪ್ರೋತ್ಸಾಹಿಸಿದ ಹಾಗೂ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ನಾನು ಚಿರ ಋಣಿಯಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಯಾಕೂಬ್.
ನಮ್ಮ ಶಾಲೆಯ ಯಾಕೂಬ್ ಸರ್ ಅವರಿಗೆ ಈ ಪ್ರಶಸ್ತಿ ಬಂದದ್ದು ತುಂಬಾ ಸಂತೋಷವಾಗುತ್ತಿದೆ. ಅವರ ಪರಿಶ್ರಮಕ್ಕೆ ಸಿಕ್ಕ ಫಲ ಇದಾಗಿದೆ. ತನ್ನದೇ ಕಲ್ಪನೆಯಲ್ಲಿ ಗಣಿತ ಲೋಕವನ್ನು ಸೃಷ್ಟಿಸಿ ವಿದ್ಯಾರ್ಥಿಗಳಿಗೆ ಗಣಿತ ಪಾಠ ಸುಲಭವಾಗಿ ಕಲಿಯುವಂತೆ ಮಾಡಿದ್ದಾರೆ. ನಮ್ಮಲ್ಲಿ ಯಾರಾದರೂ ಯಾವ ಶಾಲೆ ಎಂದು ಕೇಳಿದರೆ ತುಂಬಾ ಅಭಿಮಾನದಿಂದ ನಡ ಸರ್ಕಾರಿ ಶಾಲೆ ಎನ್ನುತ್ತೇವೆ. ಅದರಲ್ಲೂ ಯಾಕೂಬ್ ಸರ್ ಅವರು ನಮ್ಮ ಶಿಕ್ಷಕರು ಎಂಬುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ ಎಂದು ವಿದ್ಯಾರ್ಥಿನಿ ಸಂತಸ ವ್ಯಕ್ತಪಡಿಸಿದ್ದಾಳೆ.
ಈ ಬಗ್ಗೆ ಮಾತನಾಡಿರುವ ಯಾಕೂಬ್ ಪುತ್ರಿ ಜಝೀಲಾ, ನಮ್ಮ ತಂದೆಗೆ ಈ ಪ್ರಶಸ್ತಿ ಬಂದದ್ದು ತುಂಬಾ ಸಂತೋಷವಾಗುತ್ತಿದೆ. ಮಕ್ಕಳಿಗಾಗಿ ಹಲವು ಬಗೆಯ ಯೋಜನೆಗಳನ್ನು ರೂಪಿಸಿಕೊಂಡು ಬಂದವರು ಯಾವುದಾದರೊಂದು ಕಾರ್ಯವನ್ನು ಕೈಗೆತ್ತಿಕೊಂಡರೆ ಅದನ್ನು ಸಂಪೂರ್ಣವಾಗಿ ಆಗುವವರೆಗೆ ಪ್ರಯತ್ನವನ್ನು ನಿಲ್ಲಿಸುವವರಲ್ಲ. ಇವರ ಶ್ರಮಕ್ಕೆ ಇವತ್ತು ಫಲ ಸಿಕ್ಕಿದೆ ಎಂದಿದ್ದಾಳೆ.