ಮಂಗಳೂರು:ದೇವಸ್ಥಾನ ಸುತ್ತಮುತ್ತ ಪ್ರದೇಶಗಳಲ್ಲಿ ಭಿಕ್ಷೆ ಬೇಡಿ ಉಳಿದ ಒಂದು ಲಕ್ಷ ರೂಪಾಯಿ ಹಣವನ್ನು ವೃದ್ಧೆಯೊಬ್ಬರು ಬಪ್ಪನಾಡು ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಿ ಮಾದರಿಯಾಗಿದ್ದಾರೆ.
80 ಹರೆಯದ ವೃದ್ಧೆ ಈತನಕ ಭಿಕ್ಷೆ ಬೇಡಿ ಬಂದಿರುವ ಹಣದಲ್ಲಿ ವಿವಿಧ ದೇವಸ್ಥಾನಗಳಿಗೆ ಸುಮಾರು 9 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ 80ರ ವೃದ್ಧೆ ಅಶ್ವತ್ಥಮ್ಮ ಈ ಮಾದರಿ ಕೆಲಸ ಮಾಡಿದವರು.
ಸೋಮವಾರ ಮಂಗಳೂರಿನ ಹೊರವಲಯದ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಆಗಮಿಸಿ ದೇವಸ್ಥಾನದ ಅನ್ನದಾನಕ್ಕೆ 1 ಲಕ್ಷ ರೂಪಾಯಿ ದೇಣಿಗೆಯಾಗಿ ನೀಡಿದ್ದಾರೆ. ದೇಣಿಗೆ ಸ್ವೀಕರಿಸಿದ ಬಳಿಕ ದೇವಳದ ಅರ್ಚಕ ನರಸಿಂಹ ಭಟ್ ಅವರು ಅಶ್ವತ್ಥಮ್ಮ ಅವರಿಗೆ ಪ್ರಸಾದ ನೀಡಿ ಹರಸಿದರು. ಆಡಳಿತ ಮೊಕ್ತೇಸರಾದ ಮನೋಹರ್ ಶೆಟ್ಟಿದೇವಳದ ವತಿಯಿಂದ ಗೌರವಿಸಿದರು. ಅರ್ಚಕ ಪ್ರಸಾದ್ ಭಟ್, ಅಕೌಂಟೆಂಟ್ ಶಿವಶಂಕರ್ ವರ್ಮ, ಕಾರ್ತಿಕ್ ಕೋಟ್ಯಾನ್ ಮತ್ತಿತರರು ಇದ್ದರು.
ದೇವಸ್ಥಾನ ಪರಿಸರದಲ್ಲಿ ವಾಸ್ತವ್ಯ:ಇವರು ಹಲವು ವರ್ಷಗಳಿಂದ ದೇವಸ್ಥಾನ, ಟೋಲ್‌ಗೇಟ್ ಸೇರಿದಂತೆ ವಿವಿಧೆಡೆ ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಉಳಿಸಿ ದೇವಸ್ಥಾನಗಳ ಅನ್ನದಾನಕ್ಕೆ ದೇಣಿಗೆಯಾಗಿ ನೀಡುತ್ತ ಬಂದಿದ್ದಾರೆ. ಅಶ್ವತ್ಥಮ್ಮ ಅವರು ಗಂಡ, ಮಕ್ಕಳೊಂದಿಗೆ ಸಂಸಾರ ಸಾಗಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಮೊದಲು ಗಂಡ, ಮಕ್ಕಳು ಮೃತಪಟ್ಟ ಬಳಿಕ ಜೀವನದಲ್ಲಿ ಜುಗುಪ್ಸೆಗೊಂಡು ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ಬಳಿ ಭಿಕ್ಷೆ ಬೇಡಲು ಆರಂಭಿಸಿ, ದೇವಸ್ಥಾನ ಪರಿಸರದಲ್ಲಿ ವಾಸ್ತವ್ಯ ಹೂಡಲು ಆರಂಭಿಸಿದರು.