ಮಂಗಳೂರು(ದಕ್ಷಿಣ ಕನ್ನಡ):ಕೊರೊನಾ ಸಂಕಷ್ಟಕ್ಕೊಳಗಾಗಿರುವ ದುಡಿಯುವ ವರ್ಗಕ್ಕೆ ನೀಡಿರುವ ಪ್ಯಾಕೇಜ್ನಲ್ಲಿ ಸರ್ಕಾರ ತಾರತಮ್ಯ ಮಾಡಿದೆ. ಬೀಡಿ ಕಾರ್ಮಿಕ ಮಹಿಳೆಯರನ್ನು ಈ ಪ್ಯಾಕೇಜ್ನಿಂದ ಕೈಬಿಟ್ಟಿರೋದು ಸರಿಯಲ್ಲ ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ.
ಈ ಹಿನ್ನೆಲೆ ನಾವು ಸಿಎಂ ಹಾಗೂ ಸಂಬಂಧಿಸಿದ ಮಂತ್ರಿಗಳನ್ನು ಭೇಟಿಯಾಗಿ ಈ ಬಗ್ಗೆ ಮನವಿ ನೀಡಲಿದ್ದೇವೆ ಎಂದರು. ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಲಾಕ್ಡೌನ್ ಇದ್ದರೂ ಬೀಡಿ ಉದ್ಯಮವನ್ನು ಆರಂಭಿಸಬೇಕೆಂದು ನಾವು ಆಗ್ರಹಿಸಿದ್ದೆವು. ಆದರೆ ಇನ್ನೂ ಶೇ. 50ರಷ್ಟು ಕೂಡಾ ಈ ಉದ್ಯಮ ಆರಂಭವಾಗಿಲ್ಲ. ಅವರೆಲ್ಲರೂ ಸಂದಿಗ್ಧ ಪರಿಸ್ಥಿತಿಯಲ್ಲಿರುವಾಗ ಅವರಿಗೆ ವಿಶೇಷ ಪ್ಯಾಕೇಜ್ಅನ್ನು ಸರಕಾರ ಘೋಷಣೆ ಮಾಡಬೇಕು ಎಂದು ಹೇಳಿದರು.
ಬೀಡಿ ಕಾರ್ಮಿಕರಲ್ಲದೆ ಟೈಲರ್, ಹೋಟೆಲ್ ಕಾರ್ಮಿಕರು, ಖಾಸಗಿ ಬಸ್ ಚಾಲಕ, ನಿರ್ವಾಹಕ, ಫೋಟೋಗ್ರಾಫರ್ಗಳನ್ನು ಸರ್ಕಾರ ಗಮನದಲ್ಲಿರಿಸಿ ಅವರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿ ಎಂದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಬೀಡಿ ಕಾರ್ಮಿಕರಿಂದ ಇಡೀ ಕುಟುಂಬದ ನಿರ್ವಹಣೆ ಆಗುತ್ತಿದೆ. ಇಡೀ ದ.ಕ ಜಿಲ್ಲೆಯಲ್ಲಿ 1,97 ಲಕ್ಷ ಮಂದಿ ಬೀಡಿ ಕಾರ್ಮಿಕರಿದ್ದಾರೆ. ಉಡುಪಿಯಲ್ಲೂ 25-30 ಸಾವಿರ ಬೀಡಿ ಕೆಲಸಗಾರರಿದ್ದಾರೆ. ಇಡೀ ಕರಾವಳಿಯಲ್ಲಿ ಅತ್ಯಂತ ಹೆಚ್ಚು ದುಡಿಮೆಯ ವರ್ಗ ಬೀಡಿ ಕಾರ್ಮಿಕರದ್ದು. ಆದ್ದರಿಂದ ಈ ಪ್ಯಾಕೇಜ್ನಲ್ಲಿ ಬೀಡಿ ಕಾರ್ಮಿಕರನ್ನು ಬಿಟ್ಟದ್ದು ನಮಗೆ ಅತೀವ ಬೇಸರ ತಂದಿದೆ.
ಅಲ್ಲದೆ ರಾಜ್ಯ ಸರಕಾರ ಘೋಷಣೆ ಮಾಡಿದ ಪ್ಯಾಕೇಜ್ನಲ್ಲಿ 1.70 ಲಕ್ಷ ರಿಕ್ಷಾ ಚಾಲಕರಿಗೆ 5 ಸಾವಿರ ರೂಪಾಯಿ ಕೊಡಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ 8 ಲಕ್ಷ ಮಂದಿ ರಿಕ್ಷಾ ಚಾಲಕರಿದ್ದಾರೆ. ಇದರಲ್ಲಿ ಟೆಂಪೋ ಚಾಲಕರು, ಲಾರಿ ಚಾಲಕರು, ಬಸ್ ಚಾಲಕ, ನಿರ್ವಾಹಕರಿಗೆ ಯಾವುದೇ ಪ್ಯಾಕೇಜ್ ಘೋಷಣೆ ಆಗಿಲ್ಲ. ಆದ್ದರಿಂದ ನಾವು ಯು.ಟಿ.ಖಾದರ್ ನೇತೃತ್ವದಲ್ಲಿ ಸಿಎಂ ಅವರನ್ನು ಭೇಟಿಯಾಗಿ ತಕ್ಷಣ ಕರಾವಳಿ ಭಾಗದ ಕಾರ್ಮಿಕರಿಗೆ ಸರಿಯಾದ ಪ್ಯಾಕೇಜ್ ದೊರಕಬೇಕೆಂದು ಒತ್ತಡ ಹೇರಲಿದ್ದೇವೆ ಎಂದಿದ್ದಾರೆ.