ಪುತ್ತೂರು(ದಕ್ಷಿಣಕನ್ನಡ):ವಿಜಯ ಮಲ್ಯ, ನೀರವ್ ಮೋದಿ ಸೇರಿದಂತೆ ಮೊದಲಾದ ಶ್ರೀಮಂತರ ಸಾಲಮನ್ನಾ ಮಾಡುವ ಸರ್ಕಾರ, ಬಡ ಮಹಿಳೆಯರ ಕಿರು ಸಾಲಮನ್ನಾ ಮಾಡದೇ ಪ್ರತಿದಿನ ಅವರ ಮನೆಗಳಿಗೆ ಮೈಕ್ರೋ ಸಿಬ್ಬಂದಿಯನ್ನು ಕಳುಹಿಸಿ ದೌರ್ಜನ್ಯ ನಡೆಸುತ್ತಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ನ್ಯಾಯವಾದಿ ಬಿ.ಎಂ.ಭಟ್ ಹೇಳಿದ್ದಾರೆ.
ಸರ್ಕಾರ ಮಲ್ಯ, ನೀರವ್ ಮೋದಿ ಸಾಲಮನ್ನಾ ಮಾಡಿ, ಬಡವರಿಂದ ವಸೂಲಿ ಮಾಡುತ್ತಿದೆ: ಬಿ.ಎಂ.ಭಟ್
ಸರ್ಕಾರ ಬೀಡಿ ಕಾರ್ಮಿಕರ ಕಿರು ಸಾಲಮನ್ನಾ ಮಾಡದೇ ಪ್ರತಿದಿನ ಅವರ ಮನೆಗಳಿಗೆ ಮೈಕ್ರೋ ಸಿಬ್ಬಂದಿಯನ್ನು ಕಳುಹಿಸಿ ದೌರ್ಜನ್ಯ ನಡೆಸುತ್ತಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ನ್ಯಾಯವಾದಿ ಬಿ.ಎಂ.ಭಟ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿ ಮತ್ತು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ನೇತೃತ್ವದಲ್ಲಿ ಕೈ ಸಾಲಮನ್ನಾ ಮಾಡುವಂತೆ ಆಗ್ರಹಿ ಪ್ರತಿಭಟಿಸಲಾಯಿತು. ಈ ವೇಳೆ ಮಾತನಾಡಿದ ಬಿ.ಎಂ.ಭಟ್, ರಿಸರ್ವ್ ಬ್ಯಾಂಕ್ ಗೈಡ್ಲೈನ್ಸ್ ಉಲ್ಲಂಘಿಸಿ ಬಡ ಮಹಿಳೆಯರ ಕೈ ಸಾಲಗಳಿಗೆ ದುಬಾರಿ ಬಡ್ಡಿ ವಿಧಿಸಲಾಗುತ್ತಿದೆ. ಹೀಗಾಗಿ ಮೈಕ್ರೋ ಫೈನಾನ್ಸ್ ಕಿರುಸಾಲಗಳು ಕಾನೂನು ರೀತಿಯಲ್ಲಿ ಮನ್ನಾವಾಗಬೇಕಿದೆ. ಮೈಕ್ರೋ ಸಿಬ್ಬಂದಿ ಪ್ರತಿದಿನ ಬಡ ಮಹಿಳೆಯರ ಮನೆಗಳಿಗೆ ಬಂದು ಮಾನಸಿಕ ಹಿಂಸೆ, ಅವಮಾನ, ದೌರ್ಜನ್ಯ ಎಸಗುತ್ತಿದ್ದಾರೆ. ಇದು ಕ್ರಿಮಿನಲ್ ಅಪರಾಧವಾಗಿದ್ದು, ತಕ್ಷಣ ಸರ್ಕಾರ ಇದನ್ನು ತಡೆಹಿಡಿಯಬೇಕು ಎಂದರು.
ಕೊರೊನಾ ಲಾಕ್ಡೌನ್ನಿಂದಾಗಿ ಬಡ ಮಹಿಳೆಯರು ಬದುಕಲು ಕಷ್ಟ ಪಡುತ್ತಿರುವಾಗ ಮೈಕ್ರೋ ಫೈನಾನ್ಸ್ನವರು ಸಾಲದ ಕಂತು ಕೊಡಿ ಎಂದು ಹಿಂಸಿಸುತ್ತಿದ್ದರೂ ಸರ್ಕಾರ ಮೌನ ವಹಿಸಿರುವುದು ಸರಿಯಲ್ಲ. ಬೀಡಿ ಕಾರ್ಮಿಕರಿಗೆ ಯಾವುದೇ ಕೊರೊನಾ ಪ್ಯಾಕೇಜ್ ನೀಡದ ಸರ್ಕಾರ, ಬಾಕಿಯಿರುವ ಕಾರ್ಮಿಕರ ವೇತನ ಕೊಡಸಿದರೆ ನೆಮ್ಮದಿಯ ಉಸಿರು ಬಿಟ್ಟಾರು ಎಂದರು.