ಉಳ್ಳಾಲ: ಲಾಕ್ಡೌನ್ನಿಂದಾಗಿ ಕರಿಮಣಿ, ಕಿವಿಯೋಲೆ ಮಾರಿ ಬದುಕು ನಡೆಸುವ ಸ್ಥಿತಿಗೆ ಬೀಡಿ ಕಾರ್ಮಿಕರು ತಲುಪಿದ್ದಾರೆ. ರಾಜ್ಯ ಸರಕಾರ ಕಲ್ಯಾಣ ಮಂಡಳಿಯಾಗಲಿ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದಾಗಲಿ, ಬೀಡಿ ಕಂಪನಿ ಮಾಲೀಕರಿಂದಾಗಲಿ ಪರಿಹಾರವೇ ಬಂದಿಲ್ಲ ಎಂದು ಕೋಟೆಕಾರು ಬೀಡಿ ಲೇಬರ್ಸ್ ಯೂನಿಯನ್ ಕಾರ್ಯದರ್ಶಿ ಯು.ಜಯಂತ್ ನಾಯ್ಕ್ ಹೇಳಿದ್ದಾರೆ.
ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ ವತಿಯಿಂದ ತೊಕ್ಕೊಟ್ಟು ಜಂಕ್ಷನ್ನಲ್ಲಿ ಪ್ರತಿಭಟನೆ ನಡೆಸಲಾಯಿತು. ಕೊರೊನಾದಿಂದ ಕಂಗೆಟ್ಟ ಬೀಡಿ ಕಾರ್ಮಿಕರಿಗೆ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಅವರನ್ನು ಆಗ್ರಹಿಸಿ ಮಾತನಾಡಿದ ಅವರು, ರಾಜ್ಯ ಸರಕಾರದಿಂದ ಬೀಡಿ ಕಾರ್ಮಿಕರಿಗೆ ಯಾವುದೇ ರೀತಿಯ ಪರಿಹಾರ ಘೋಷಣೆಯಾಗಿಲ್ಲ. ಕೆಲಸವಿಲ್ಲದೆ ಕುಟುಂಬ ನಿರ್ವಹಣೆ ದುಸ್ತರವಾಗಿದೆ. ಅತ್ಯಂತ ಬಡ ಕಾರ್ಮಿಕ ವಿಭಾಗವಾದ ಬೀಡಿ ಕಾರ್ಮಿಕರು ಸರ್ಕಾರದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ ಎಂದಿದ್ದಾರೆ.