ಮಂಗಳೂರು:ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊಟ್ಪಾ ಕಾಯ್ದೆಗೆ ಕಾರ್ಮಿಕ ವಿರೋಧಿ ತಿದ್ದುಪಡಿ ತರುತ್ತಿರುವುದನ್ನು ವಿರೋಧಿಸಿ ಮಂಗಳೂರು ನಗರದ ಬೀಡಿ ಕಾರ್ಮಿಕರಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಹೆಚ್ಎಂಎಸ್ ಸಂಘಟನೆಯ ಮಹಮ್ಮದ್ ರಫಿ ಮಾತನಾಡಿ, 13 ರಾಜ್ಯಗಳ ಸುಮಾರು ಮೂರು ಕೋಟಿಗೂ ಹೆಚ್ಚು ನೌಕರರು ಬೀಡಿ ಉದ್ಯಮವನ್ನು ನಂಬಿ ಬದುಕುತ್ತಿದ್ದಾರೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊಟ್ಪಾ ಕಾಯ್ದೆಗೆ ತಿದ್ದುಪಡಿ ಮಾಡಿ, ಇಷ್ಟೊಂದು ಮಂದಿ ನಾಗರಿಕರ ಮೇಲೆ ಪ್ರಹಾರ ಮಾಡುವುದು ಸರಿಯಲ್ಲ. ಕೊರೊನಾ ಸಂಕಷ್ಟದ ಕಾಲದಲ್ಲೂ ಯಾವುದೇ ಬೀಡಿ ಕಾರ್ಮಿಕ ಮಹಿಳೆಯರಿಗೆ ಸೋಂಕು ತಗುಲಿಲ್ಲ. ಆದರೆ ಇದೀಗ ಸರ್ಕಾರ ಕೊಟ್ಪಾ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಮಿಕರ ಜೀವನಕ್ಕೆ ಕೊಳ್ಳಿ ಇಡುವ ಕಾರ್ಯ ಮಾಡುತ್ತಿದೆ. ಆದ್ದರಿಂದ ಇಂತಹ ಕಾರ್ಮಿಕ ವಿರೋಧಿ ಕಾನೂನು ತಕ್ಷಣ ರದ್ದಾಗಲಿ ಎಂದು ಹೇಳಿದರು.