ಮಂಗಳೂರು: ಗೋವುಗಳ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಮಂಗಳೂರಿನ ಕಮಿಷನರೇಟ್ ವ್ಯಾಪ್ತಿಯ ಅಷ್ಟೇ ಅಲ್ಲದೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹಾಗೂ ಕೇರಳ ರಾಜ್ಯದಲ್ಲಿ ಕೆಲವೊಂದು ಗೋವು ಕಳವು ಆರೋಪಿಗಳು ವಾಸಿಸುತ್ತಿದ್ದಾರೆ. ಆ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಿದ್ದು, ರಾತ್ರಿ ಬೀಟ್ಗಳನ್ನು ಬಿಗಿಗೊಳಿಸಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿದರು. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪೊಲೀಸ್ ಫೋನ್ ಇನ್ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದರು.
ಈಗಾಗಲೇ ಹಳೆಯ ಗೋವು ಕಳವು ಆರೋಪಿಗಳ ಪಟ್ಟಿ ಮಾಡಲಾಗಿದೆ. ರಾತ್ರಿ ಬೀಟ್ನ ಪೊಲೀಸರು ಅವರುಗಳ ಮನೆಗೆ ತೆರಳಿ ಅವರು ಮನೆಯಲ್ಲಿದ್ದಾರೆಯೇ, ಅಥವಾ ಹೊರಗಡೆ ಹೋಗಿದ್ದಾರೆಯೇ, ಯಾವ ಕಾರಣಕ್ಕಾಗಿ ಹೊರ ಹೋಗಿದ್ದಾರೆ ಎಂಬುದನ್ನು ಪರಿಶೀಲನೆ ಮಾಡುತ್ತಾರೆ. ಅಲ್ಲದೆ ಸಾರ್ವಜನಿಕರಿಗೆ ಗೋವು ಕಳವು, ಅಕ್ರಮ ಗೋವು ಸಾಗಣೆಯ ಮಾಹಿತಿಗಳು ಲಭ್ಯವಾದರೆ ಅವರೇ ಕಾನೂನನ್ನು ಕೈಗೆ ತೆಗೆದುಕೊಳ್ಳದೆ ಪೊಲೀಸರಿಗೆ ದೂರು ನೀಡಿದರೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂದೀಪ್ ಪಾಟೀಲ್ ಹೇಳಿದ್ರು.
ಇಂದಿನ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ 25 ಕರೆಗಳು ಬಂದಿದ್ದು, ಅದರಲ್ಲಿ ಟ್ರಾಫಿಕ್ ಸಂಬಂಧಿ ದೂರು ನೀಡುವ ಕರೆಗಳೇ ಅಧಿಕವಾಗಿದ್ದವು. ಬಸ್ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಟ್ರಾಫಿಕ್ ಜಾಮ್ ಮಾಡಲಾಗುತ್ತದೆ. ನಗರದಲ್ಲಿ ಅನುಮತಿ ಇಲ್ಲದೆ ರಿಕ್ಷಾ ಓಡಿಸಲಾಗುತ್ತಿದೆ. ಮಹಾನಗರ ಪಾಲಿಕೆಯ ವಾಹನಗಳು ನಗರಗಳ ಮುಖ್ಯ ರಸ್ತೆಗಳಲ್ಲಿ ಕಸ ವಿಲೇವಾರಿ ಮಾಡುತ್ತಿದ್ದಾರೆ. ಪಾರ್ಕಿಂಗ್ ಸ್ಥಳವಿದ್ದರೂ ರಸ್ತೆಯಲ್ಲೇ ವಾಹನಗಳನ್ನು ಪಾರ್ಕ್ ಮಾಡುವುದು. ಓವರ್ ಸ್ಪೀಡ್ ವಾಹನ ಚಲಾಯಿಸುವುದು. ರಸ್ತೆ ಎರಡೂ ಬದಿಗಳಲ್ಲಿ ಪಾರ್ಕ್ ಮಾಡಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ನೀರಿನ ಪೈಪ್ ಹಾಕಲು ಒಂದು ತಿಂಗಳಿನ ಹಿಂದೆ ತೆಗೆದ ಗುಂಡಿ ಇನ್ನೂ ಮುಚ್ಚಿಲ್ಲ ಎನ್ನುವುದು ಸೇರಿದಂತೆ ಮುಂತಾದ ದೂರುಗಳು ಕೇಳಿಬಂದವು.
ಈ ಎಲ್ಲಾ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿದ ಆಯುಕ್ತ ಸಂದೀಪ್ ಪಾಟೀಲ್ ಅವರು, ತಕ್ಷಣ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ರು.