ಮಂಗಳೂರು: ಬೆಂಗಳೂರು ಗಲಭೆಯಲ್ಲಿ ಎಸ್ಡಿಪಿಐಯೊಂದಿಗೆ ಬಿಜೆಪಿ ಕೈವಾಡವಿದೆ ಎಂಬ ಶಾಸಕ ಯು.ಟಿ.ಖಾದರ್ ಆರೋಪದಲ್ಲಿ ಯಾವುದೇ ಹುರಳಿಲ್ಲ. ಅವರು ಎಲ್ಲಾ ಘಟನೆಗಳನ್ನು ಕೋಮು ದೃಷ್ಟಿಯಿಂದ ನೋಡುತ್ತಿದ್ದಾರೆ. ಅಲ್ಲದೆ ಅವರದ್ದು ರಾಜಕೀಯ ಪ್ರೇರಿತ ಹೇಳಿಕೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಬಸವರಾಜ ಬೊಮ್ಮಾಯಿ, ಗೃಹ ಸಚಿವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆಯು ಪೂರ್ವನಿಯೋಜಿತ ಕೃತ್ಯವೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಂದು ಸಂಜೆ ಸಿಎಂ ಯಡಿಯೂರಪ್ಪರ ಜತೆ ಉನ್ನತ ಮಟ್ಟದ ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.
ಪುಂಡಾಟದ ಮೂಲಕ ಸಮಾಜದ ಶಾಂತಿ ಹದಗೆಡಿಸುವ ಕೃತ್ಯ ನಡೆದಿದೆ. ಪರಿಸ್ಥಿತಿ ಸಂಪೂರ್ಣ ಕೈಮೀರಿದ್ದರಿಂದ ಕೊನೆಯದಾಗಿ ಪೊಲೀಸರು ಗೋಲಿಬಾರ್ ನಡೆಸಿದ್ದಾರೆ. ಇದರಲ್ಲಿ ಮೂವರು ಮೃತಪಟ್ಟಿದ್ದಾರೆ. ಪೋಲಿಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಓರ್ವ ಪೊಲೀಸ್ ಸಿಬ್ಬಂದಿ ತಲೆಗೆ ಗಾಯವಾಗಿದೆ. ಈಗಾಗಲೇ 110 ಮಂದಿಯನ್ನು ಬಂಧಿಸಲಾಗಿದೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮದ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಚರ್ಚೆ ನಡೆಸಿದ್ದಾರೆ. ಹೈದರಾಬಾದ್ನಿಂದ ಮೂರು ಹಾಗೂ ಚೆನ್ನೈನಿಂದ ಮೂರು ಸಿಆರ್ಪಿಎಫ್ ತುಕಡಿಗಳು ಬೆಂಗಳೂರಿಗೆ ಆಗಮಿಸಲಿವೆ. ಅಲ್ಲದೆ ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ ಕೂಡಾ ಬರಲಿದೆ. ಘಟನೆಯ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದ್ದು, ಸತ್ಯ ಹೊರಬರಲಿದೆ ಎಂದು ಅವರು ಹೇಳಿದರು.