ಬಂಟ್ವಾಳ(ದಕ್ಷಿಣ ಕನ್ನಡ): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುರಿಯುವ ಮಳೆಯ ಮಧ್ಯೆ ಶನಿವಾರ ರಾತ್ರಿ ಬಂಟ್ವಾಳ ತಾಲೂಕು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವವನ್ನು ವೀಕ್ಷಿಸಿದರು. ಸಾವರ್ಕರ್ ಕರಿನೀರಿನ ಶಿಕ್ಷೆ, ಉದಮ್ ಸಿಂಗ್ ಬಲಿದಾನ, ಕಾಶಿ ದರ್ಶನದಂಥ ಪ್ರದರ್ಶನಗಳನ್ನು ನೀಡಿದ ವಿದ್ಯಾಕೇಂದ್ರದ ವಿದ್ಯಾರ್ಥಿಗಳನ್ನು ಶ್ಲಾಘಿಸಿದ ಸಿಎಂ, ಇಲ್ಲಿಗೆ ಬಾರದೇ ಇದ್ದಿದ್ದರೆ ಇಂಥ ಪ್ರದರ್ಶನ ನೋಡುವ ಅವಕಾಶ ತಪ್ಪಿ ಹೋಗುತ್ತಿತ್ತು ಎಂದರು.
ಬಲೂನ್‌ಗಳನ್ನು ಆಗಸಕ್ಕೆ ಹಾರಿಬಿಡುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬದುಕಿನುದ್ದಕ್ಕೂ ಅನೇಕ ಪರೀಕ್ಷೆಗಳಿರುತ್ತವೆ. ಅವುಗಳನ್ನು ಎದುರಿಸಲು ಅಗತ್ಯವಿರುವ ಜೀವನ ಮೌಲ್ಯಗಳನ್ನು ಪ್ರಭಾಕರ ಭಟ್ ನೇತೃತ್ವದ ಶ್ರೀರಾಮ ವಿದ್ಯಾಕೇಂದ್ರ ನೀಡುತ್ತಿದೆ. ಇಂಥ ಶಿಕ್ಷಣ ಸಂಸ್ಥೆ ಭಾರತದಲ್ಲಿ ಎಲ್ಲಿಯೂ ಇಲ್ಲ. ಯಾರು, ಏನು, ಎಲ್ಲಿ, ಹೇಗೆ ಹಾಗು ಯಾವಾಗ ಎಂಬ ಐದು ಪ್ರಶ್ನೆಗಳಿಗೆ ಉತ್ತರ ಹುಡುಕಿದರೆ ನಮ್ಮ ಜೀವನ ಯಶಸ್ವಿಯಾಗಲು ಸಾಧ್ಯ ಎಂದರು.