ಮಂಗಳೂರು: ಲವ್ ಜಿಹಾದ್ ಸಮಾಜದಲ್ಲಿ ಅತಿರೇಕ ಪಡೆದಿದ್ದು, ಅದಕ್ಕೆ ಕಡಿವಾಣ ಹಾಕಲು ಕಾನೂನಿನ ಅಗತ್ಯವಿದೆ. ರಾಜ್ಯ ಸರ್ಕಾರವೂ ಲವ್ ಜಿಹಾದ್ ವಿರುದ್ಧ ಸಮಗ್ರವಾದ ಕಾನೂನು ಜಾರಿಗೊಳಿಸಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಲವ್ ಜಿಹಾದ್ ಕಾನೂನು ಜಾರಿಗೊಳಿಸಲು ಚಿಂತನೆ ನಡೆಸುತ್ತಿರುವ ಉತ್ತರ ಪ್ರದೇಶ, ಹರಿಯಾಣ ರಾಜ್ಯಗಳನ್ನು ಸಂಪರ್ಕಿಸಲಾಗಿದೆ. ಈ ಬಗ್ಗೆ ಮಾಹಿತಿಗಳನ್ನು ತರಿಸಿಕೊಂಡು ಚರ್ಚೆ ನಡೆಸಿ ಸಮಗ್ರವಾದ ಕಾನೂನು ರಾಜ್ಯದಲ್ಲಿಯೂ ಜಾರಿಗೊಳಿಸಲಾಗುತ್ತದೆ ಎಂದು ಹೇಳಿದರು.
ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸುಲಭವಾಗಿ ಮತಾಂತರ ಮಾಡುವ ಪ್ರಕ್ರಿಯೆಯಾಗಿರುವ ಲವ್ ಜಿಹಾದ್ ಸಾಮಾಜಿಕ ಪಿಡುಗಾಗಿದ್ದು, ಸಮಾಜದ ಸ್ವಾಸ್ಥ್ಯ, ಶಾಂತಿಯನ್ನು ಹಾಳುಗೆಡವುತ್ತಿದೆ. ಮೊದಲು ವರದಕ್ಷಿಣೆ ಪಡೆಯಲಾಗುತ್ತಿದ್ದರೂ, ಅದಕ್ಕೆ ಕಾನೂನು ಇರಲಿಲ್ಲ. ವರದಕ್ಷಿಣೆ ಪ್ರಕರಣಗಳು ಹೆಚ್ಚುತ್ತಿದ್ದಂತೆ ಅದಕ್ಕೊಂದು ಕಾಯ್ದೆ ತರಲಾಯಿತು. ಅದೇ ರೀತಿ ಲವ್ ಜಿಹಾದ್ ಕೂಡಾ ಬಹಳಷ್ಟು ವರ್ಷಗಳಿಂದ ಸಮಾಜದಲ್ಲಿ ಕಂಡು ಬರುತ್ತಿದೆ. ಕೆಲವೊಂದು ಕಡೆಗಳಲ್ಲಿ ಈ ಬಗ್ಗೆ ದೂರುಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಹಿಂಸೆ ಕೂಡಾ ಸಂಭವಿಸಿದೆ. ಆದ್ದರಿಂದ ರಾಜ್ಯದಲ್ಲಿಯೂ ಇದರ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಲಾಗುತ್ತದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.
ಮಂಗಳೂರಿನಲ್ಲಿ ವಿವಾದಾತ್ಮಕ ಗೋಡೆಬರಹಗಳು ಕಾಣಿಸಿಕೊಂಡ ತಕ್ಷಣ ನಾನು ಪೊಲೀಸ್ ಆಯುಕ್ತರರ ಸಂಪರ್ಕದಲ್ಲಿದ್ದು, ಈ ಕೃತ್ಯದಲ್ಲಿ ತೊಡಗಿರುವವರನ್ನು ತಕ್ಷಣ ಬಂಧಿಸಬೇಕು ಎಂದು ಸೂಚಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಈಗಾಗಲೇ ತನಿಖಾ ತಂಡ ರಚಿಸಿ, ಮಂಗಳೂರು ಸುತ್ತಮುತ್ತ ನಿಗಾ ಇರಿಸಲಾಗಿದೆ. ಶೀಘ್ರದಲ್ಲೇ ಅವರ ಬಂಧನವಾಗಲಿದೆ. ಇದು ಪುನರಾವರ್ತನೆ ಆಗದ ರೀತಿಯಲ್ಲಿ ಬೀಟ್ಸ್ ಹೆಚ್ಚಳ ಮಾಡಬೇಕು. ಡಿಸಿಪಿಗಳನ್ನು ನೈಟ್ಸ್ ಬೀಟ್ಸ್ ಮಾಡಲು ಆದೇಶಿಸಿದ್ದೇನೆ ಎಂದು ಹೇಳಿದರು.
ಮಂಗಳೂರಿನಲ್ಲಿ ಸಿಸಿ ಕ್ಯಾಮರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ವಿಚಾರ ಗಮನಕ್ಕೆ ಬಂದಿದೆ. ಹಾಗಾಗಿ ಎಲ್ಲಾ ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ತಿಳಿಸಿದ್ದೇವೆ. ಬಹಳಷ್ಟು ಜನರು ಕ್ಯಾಮರಾಗಳನ್ನು ಉಚಿತವಾಗಿ ನೀಡಲು ಮುಂದೆ ಬರುತ್ತಿದ್ದಾರೆ. ಇಂತಹ ಕ್ಯಾಮರಾಗಳನ್ನು ಎಲ್ಲೆಲ್ಲಿ ಅಗತ್ಯವಿದೆಯೇ ಅಲ್ಲೆಲ್ಲಾ ಅಳವಡಿಸಲಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ವಿವರಿಸಿದರು.
ಗೋಹತ್ಯೆ ನಿಷೇಧ ಮಹಾತ್ಮಾ ಗಾಂಧೀಜಿಯವರ ವಿಚಾರ. 1960 ರಿಂದ ಗೋಹತ್ಯೆ ನಿಷೇಧ ಕಾನೂನುಗಳು ಜಾರಿಯಲ್ಲಿವೆ. ಆದರೆ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಲು ಆ ಕಾನೂನು ಅಷ್ಟೊಂದು ಬಲವಾಗಿಲ್ಲ. ಆದ್ದರಿಂದಲೇ ಅದರ ದುರುಪಯೋಗ ಈಗಲೂ ಮುಂದುವರಿದಿದೆ. ಹಿಂದೆ ನಾವು ಇದಕ್ಕೊಂದು ಕಾನೂನು ತರುವಾಗ ಅಂದಿನ ಗವರ್ನರ್ ಅನುಮತಿ ನೀಡಿರಲಿಲ್ಲ. ಇದೀಗ ಈ ಕಾನೂನು ಬೇರೆ ಬೇರೆ ರಾಜ್ಯದಲ್ಲಿ ಜಾರಿಗೆ ಬಂದಿದೆ. ನಮ್ಮ ರಾಜ್ಯದಲ್ಲಿಯೂ ಹಿಂದಿನ ಕಾನೂನಿಗೆ ತಿದ್ದುಪಡಿ ಮಾಡಿ ಹೆಚ್ಚಿನ ಬಲ ನೀಡಿ ಸಂಪೂರ್ಣವಾಗಿ ಗೋಹತ್ಯೆ ನಿಲ್ಲಿಸಲು ಶೀಘ್ರದಲ್ಲೇ ಕಾನೂನು ಜಾರಿಯಾಗುತ್ತದೆ ಎಂದರು.
ಸೈಬರ್ ವಿಭಾಗದಲ್ಲಿ ನುರಿತರ ಕೊರತೆ ಇದೆ ಎಂಬ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪೊಲೀಸರಿಗೆ ಸೀಮಿತವಾದ ವ್ಯಾಪ್ತಿ ಇದೆ. ಅದಕ್ಕಾಗಿ ಐಟಿ ತರಬೇತಿದಾರರನ್ನು ಗುತ್ತಿಗೆ ಆಧಾರದಲ್ಲಿ ಆಯ್ಕೆ ಮಾಡಿ ಅನುಮತಿ ದೊರಕಿದೆ. ಆದ್ದರಿಂದ ಪ್ರತಿಯೊಂದು ಸೆನ್ ಪೊಲೀಸ್ ಠಾಣೆಗೂ ನುರಿತ ಐಟಿ ವಿಭಾಗದವರನ್ನು ನೇಮಕ ಮಾಡಲಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.