ಬಂಟ್ವಾಳ (ದಕ್ಷಿಣ ಕನ್ನಡ): ಹೊರರಾಜ್ಯಗಳಿಂದ ಬಂದು ಕ್ವಾರಂಟೈನ್ನಲ್ಲಿರುವವರು ಅನಗತ್ಯವಾಗಿ ಹೊರಗೆ ತಿರುಗುತ್ತಿರುವುದು ಕಂಡುಬಂದರೆ ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಎಚ್ಚರಿಸಿದ್ದಾರೆ.
ಹೋಂ ಕ್ವಾರಂಟೈನ್ನಲ್ಲಿರುವವರು ಹೊರಗೆ ತಿರುಗಾಡಿದರೆ ಕಠಿಣ ಕ್ರಮ...ಬಂಟ್ವಾಳ ತಹಶೀಲ್ದಾರ್
ಕೊರೊನಾ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಹೊರರಾಜ್ಯದಿಂದ ಬಂದವರು ಕ್ವಾರಂಟೈನ್ ಅವಧಿ ಮುಗಿಯುವವರೆಗೆ ಮನೆಯಲ್ಲಿರಬೇಕು. ಒಂದು ವೇಳೆ ಅನಗತ್ಯವಾಗಿ ಹೊರಗೆ ತಿರುಗಾಡಿದರೆ ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಬಂಟ್ವಾಳ ತಹಶೀಲ್ದಾರ್ ಎಚ್ಚರಿಸಿದ್ದಾರೆ.
ತಾಲೂಕಿನಲ್ಲಿ ಒಟ್ಟು ಮೂರು ಖಾಸಗಿ ವಸತಿಗೃಹ ಸೇರಿದಂತೆ 12 ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗಿದ್ದು, ಹೊರರಾಜ್ಯದಿಂದ ಬಂದ ಸುಮಾರು 200 ಕ್ಕೂ ಅಧಿಕ ಮಂದಿ ವಾಸ್ತವ್ಯ ಇದ್ದಾರೆ. ಕ್ವಾರಂಟೈನ್ ಕೇಂದ್ರದಿಂದ ಹೊರಗಡೆ ಸುತ್ತಾಡುವುದು ಕಂಡು ಬಂದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ರಶ್ಮಿ ಎಸ್.ಆರ್. ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.
ಹೊರರಾಜ್ಯದಿಂದ ಬಂದಿರುವ ಗರ್ಭಿಣಿಯರು, ಹಿರಿಯ ವ್ಯಕ್ತಿಗಳು ಹಾಗೂ ಮಕ್ಕಳ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಿ ನೆಗೆಟಿವ್ ಬಂದವರನ್ನು ಹೋಮ್ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ನೆಗೆಟಿವ್ ಇದ್ದರು ಕೂಡಾ ಆ ವ್ಯಕ್ತಿಗಳು ಹೊರಗೆ ತಿರುಗಾಡಬಾರದು ಎಂದು ರಶ್ಮಿ ಸೂಚಿಸಿದ್ದಾರೆ.