ಮಂಗಳೂರು: ಯಾವುದೇ ಬ್ಯಾಂಕ್ ಖಾತೆದಾರ ಎಟಿಎಂ ಪಿನ್ ಸಂಖ್ಯೆ, ಒಟಿಪಿ ಸಂಖ್ಯೆ ಶೇರ್ ಮಾಡದಿದ್ದರೂ, ಅವರ ಬ್ಯಾಂಕ್ ಖಾತೆಯಿಂದ ಹಣಕಾಸು ವಂಚನೆ ನಡೆದಿದ್ದರೆ, ಘಟನೆ ನಡೆದ ಮೂರು ದಿನಗಳೊಳಗೆ ಬ್ಯಾಂಕ್ಗೆ ದೂರು ನೀಡಿದಲ್ಲಿ, ಬ್ಯಾಂಕ್ ಆತನ ನಗದನ್ನು ಹಿಂದಿರುಗಿಸುತ್ತದೆ ಎಂದು ಡಿಸಿಪಿ ಹರಿರಾಂ ಶಂಕರ್ ಹೇಳಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಎಟಿಎಂ ಸ್ಕಿಮ್ಮಿಂಗ್ ಪ್ರ್ಯಾತ್ಯಕ್ಷಿಕೆಯ ಬಳಿಕ ಈ ಬಗ್ಗೆ ಮಾಹಿತಿ ನೀಡಿದರು. ಈ ಬಗ್ಗೆ ಹೆಚ್ಚಿನವರಿಗೆ ಅರಿವು ಇಲ್ಲ. ಕೇವಲ ಎಫ್ಐಆರ್ ಆದರೆ ಮಾತ್ರ ನ್ಯಾಯ ಸಿಗುವುದಿಲ್ಲ. ಬ್ಯಾಂಕ್ ಖಾತೆದಾರ ಈ ಬಗ್ಗೆ ತಕ್ಷಣ ಆಯಾ ಬ್ಯಾಂಕ್ಗೆ ಹಣ ವಂಚನೆಗೊಳಗಾಗಿರುವ ಬಗ್ಗೆ ದೂರು ನೀಡಿದಲ್ಲಿ ಆತನ ಹಣ ವಾಪಸ್ ದೊರೆಯುತ್ತದೆ ಎಂದು ಹೇಳಿದರು.
ಎಟಿಎಂ ಸ್ಕಿಮ್ಮಿಂಗ್ ಪ್ರ್ಯಾತ್ಯಕ್ಷಿಕೆ ನೀಡಿದ ಡಿಸಿಪಿ ಎಟಿಎಂ ಸ್ಕಿಮ್ಮಿಂಗ್ ಆಗಿದೆಯೇ ಎಂದು ಪರಿಶೀಲಿಸಲು ಎಟಿಎಂ ಯಂತ್ರದ ಕೀಪ್ಯಾಡ್ ಬದಿಯ ಎರಡೂ ಕಡೆಗಳಲ್ಲಿ ಎರಡೂ ಹಸ್ತದಿಂದ ಸ್ಪರ್ಶಿಸಬೇಕು. ಈ ಸಂದರ್ಭ ಸಣ್ಣ ಕ್ಯಾಮರಾದ ರೀತಿಯ ವಸ್ತು ದೊರೆತಲ್ಲಿ ಆ ಎಟಿಎಂ ಯಂತ್ರ ಸ್ಕಿಮ್ಮಿಂಗ್ ಆಗಿದೆಯೆಂದು ಸ್ಪಷ್ಟ. ಅಲ್ಲದೇ ತಕ್ಷಣ ಈ ಬಗ್ಗೆ ಬ್ಯಾಂಕ್ಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಡಿಸಿಪಿ ನಾಗರಿಕರಲ್ಲಿ ವಿನಂತಿಸಿಕೊಂಡರು.
ಈಗಾಗಲೇ ಮಂಗಳೂರಿನಲ್ಲಿ ನಾಲ್ವರು ಸ್ಕಿಮ್ಮಿಂಗ್ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು, ಇವರು ಎಟಿಎಂ ಕಾರ್ಡ್ಗಳನ್ನು ಹ್ಯಾಕ್ ಮಾಡಲು ಬೇಕಾದ ಉಪಕರಣಗಳನ್ನು ಅಲಿಬಾಬಾ ಡಾಟ್ ಕಾಂನಲ್ಲಿ ಖರೀದಿ ಮಾಡಿದ್ದೇವೆಂದು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ಆದರೆ ನಮ್ಮ ತನಿಖೆಯ ಪ್ರಕಾರ ಇದರ ಹಿಂದೆ ಹೊರ ರಾಜ್ಯಗಳ ದುಷ್ಕರ್ಮಿಗಳ ಮೂಲವುಳ್ಳ ಬೃಹತ್ ಜಾಲವೇ ಇದೆ. ಸ್ಕಿಮ್ಮಿಂಗ್ ಉಪಕರಣಗಳು ಸುಲಭದಲ್ಲಿ ಸಿಗುವಂತದ್ದಲ್ಲ, ಸಿಕ್ಕಿದರೂ ತಾಂತ್ರಿಕವಾಗಿ ಮಾಹಿತಿ ಇದ್ದಲ್ಲಿ ಮಾತ್ರ ಅದನ್ನು ಬಳಸಲು ಸಾಧ್ಯ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ, ಗೋವಾ, ಚೆನ್ನೈ ಹಾಗೂ ಮಂಗಳೂರು ಮೂಲದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಹರಿರಾಂ ಶಂಕರ್ ಹೇಳಿದರು.