ಪುತ್ತೂರು :ಪುತ್ತೂರಿನ ಕೆಮ್ಮಿಂಜೆ ಗ್ರಾಮದ ಸಮೀಪ ಬಡತನದಲ್ಲಿರುವ ಕುಟುಂಬವೊಂದರ ಬೀಳುವ ಸ್ಥಿತಿಯಲ್ಲಿದ್ದ ಮನೆಗೆ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಸಂಘಟನೆಗಳು ಆಶ್ರಯವಾಗಿ ನಿಂತಿವೆ.
ಕ್ಯಾಂಪ್ಕೋ ಇನ್ ಸೇವಾ, ನಗರಸಭೆ ಮತ್ತು ದಾನಿಗಳ ಸಹಕಾರದೊಂದಿಗೆ ನೂತನ ಮನೆ ನಿರ್ಮಾಣ ಕಾರ್ಯ ಮಾಡಲಾಗಿದೆ. ನಿರ್ಮಾಣಗೊಂಡ ನೂತನ 'ಹನುಮಾನ್ ನಿಲಯ'ವನ್ನು ಪ್ರಕಾಶ್ ದಂಪತಿ ಕುಟುಂಬಕ್ಕೆ ಸಮರ್ಪಣೆ ಮಾಡಲಾಯಿತು.
ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ನೂತನ ಮನೆಯನ್ನು ಪ್ರಕಾಶ್ ದಂಪತಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. ಬಡ ಕುಟುಂಬಕ್ಕೆ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.
ನಂತರ ಮಾತನಾಡಿದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಸಮಾಜದ ಸೇವೆಯನ್ನು ಮಾಡುವ ಸಂದರ್ಭದಲ್ಲಿ ಯಾರು ಕುಂದು ಕೊರತೆಯಲ್ಲಿದ್ದಾರೋ ಅವರಿಗೆ ಈ ಸೇವೆ ಸಲ್ಲಬೇಕು.
ಈ ನಿಟ್ಟಿನಲ್ಲಿ ಕ್ಯಾಂಪ್ಕೋ ನೌಕರರು ಮತ್ತು ದಾನಿಗಳನ್ನು ಒಟ್ಟು ಸೇರಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಉತ್ತಮ ಕೆಲಸ ಮಾಡುವ ಮೂಲಕ ಹನುಮಾನ್ ನಿಲಯವನ್ನು ಪ್ರಕಾಶ್ ಪೂಜಾರಿ ದಂಪತಿಗೆ ಸಮರ್ಪಣೆ ಮಾಡಿದ್ದಾರೆ. ಇದು ಹಿಂದೂ ಸಮಾಜದ ಸೇವೆಯಾಗಿದೆ. ಸೇವೆ ಮಾಡುವುದನ್ನು ಕಲಿಸಿದ್ದೇ ಹಿಂದು ಧರ್ಮ ಎಂದರು.
ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಫ್ರೊ. ಎಂ ಬಿ ಪುರಾಣಿಕ್ ಮಾತನಾಡಿ, ಸಮಾಜದ ಕಷ್ಟದಲ್ಲಿರುವವರಿಗೆ ಸ್ಪಂದಿಸಿದ ನಮ್ಮ ಸಂಘಟನೆಯ ಕಾರ್ಯ ಮಾದರಿಯಾಗಿದೆ. ಇಂತಹ ಕೆಲಸ ಮುಂದೆ ನಿರಂತರ ನಡೆಯಲಿ ಎಂದರು. ಕೆಮ್ಮಿಂಜಿ ಶ್ರೀ ಷಣ್ಮುಖ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಬಳ್ಳಕುರಾಯ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ಇದನ್ನೂ ಓದಿ : 5 ಕೆಜಿ ಗೋಡಂಬಿ, 2 ಕೆಜಿ ಬಾದಾಮಿಯಿಂದ ಅಲಂಕಾರಗೊಂಡ ಮಾರುತಿ