ಕರ್ನಾಟಕ

karnataka

ETV Bharat / state

ಹವಾಮಾನ ವೈಪರೀತ್ಯ : ಮಂಗಳೂರು ವಿಮಾನ ನಿಲ್ದಾಣದಲ್ಲಿ ತಡವಾಗಿ ಲ್ಯಾಂಡ್ ಆದ ವಿಮಾನಗಳು - ಮುಂದುವರಿದ ಮಳೆಯ ಆರ್ಭಟ

ಹವಾಮಾನ ವೈಪರೀತ್ಯದಿಂದಾಗಿ ಮುಂಬೈ ಮತ್ತು ದುಬೈನಿಂದ ಆಗಮಿಸಿದ್ದ ವಿಮಾನಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ತಡವಾಗಿ ಲ್ಯಾಂಡ್​ ಆಗಿವೆ.

bad-weather-flights-landed-late-at-mangalore-airport
ಹವಾಮಾನ ವೈಪರೀತ್ಯ : ಮಂಗಳೂರು ವಿಮಾನ ನಿಲ್ದಾಣದಲ್ಲಿ ತಡವಾಗಿ ಲ್ಯಾಂಡ್ ಆದ ವಿಮಾನಗಳು

By

Published : Jul 8, 2023, 11:06 AM IST

Updated : Jul 8, 2023, 12:16 PM IST

ಮಂಗಳೂರು: ಹವಾಮಾನ ವೈಪರೀತ್ಯದಿಂದಾಗಿ ಮುಂಬೈ ಹಾಗೂ ದುಬೈಯಿಂದ ಆಗಮಿಸಿರುವ ವಿಮಾನಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ತಡವಾಗಿ ಲ್ಯಾಂಡಿಂಗ್ ಆಗಿದೆ. ಜೊತೆಗೆ ಹೈದರಾಬಾದ್​ನಿಂದ ಆಗಮಿಸಿರುವ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೆ ಆಕಾಶದಲ್ಲೇ ಸುತ್ತುಹಾಕಿ ಮತ್ತೆ ಹಿಂತಿರುಗಿ ಬಂದು ಲ್ಯಾಂಡ್ ಆಗಿದೆ. ಭಾರಿ ಮಳೆಯಿಂದಾಗಿ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಮುಂದುವರಿದ ಮಳೆಯ ಆರ್ಭಟ :ಕಳೆದಸೋಮವಾರದಿಂದ ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆ ಭಾರಿ ಮಳೆಯಾಗುತ್ತಿದೆ. ಶುಕ್ರವಾರ ಮಳೆ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿದ್ದು, ಇಂದು ಮುಂಜಾನೆಯಿಂದ ಮತ್ತೆ ಆರಂಭವಾಗಿದೆ. ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಮಳೆ ಹಾನಿ ಸಂಭವಿಸಿದೆ. ಮಳೆಯಿಂದಾಗಿ ನಾಲ್ವರು ಸಾವನ್ನಪ್ಪಿದ್ದು, ಓರ್ವ ನೀರುಪಾಲಾಗಿದ್ದಾನೆ. ನೂರಾರು ಮನೆಗಳು ಜಲಾವೃತಗೊಂಡಿವೆ.

ಶುಕ್ರವಾರ ಮಳೆ ಕೊಂಚ ಬಿಡುವು ನೀಡಿದ ಹಿನ್ನೆಲೆಯಲ್ಲಿ ಇಂದು ಶಾಲೆ ಕಾಲೇಜಿಗಳಿಗೆ ರಜೆಯನ್ನು ನೀಡಿರಲಿಲ್ಲ. ಮಂಗಳವಾರದಿಂದ ಶುಕ್ರವಾರದವರೆಗೆ ಶಾಲೆ,‌ ಪ್ರೌಢಶಾಲೆ ಮತ್ತು ಪಿಯು ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

ನೀರು ಪಾಲಾದ ಕಾರ್ಮಿಕನಿಗಾಗಿ ಮುಂದುವರೆದ ಶೋಧ :ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಕಾಲು ಸಂಕ ದಾಟುತ್ತಿರುವ ವೇಳೆ ನೀರು ಪಾಲಾದ ಕೂಲಿ ಕಾರ್ಮಿಕನ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಎನ್‌ಡಿಆ‌ರ್ ಎಫ್ ಮತ್ತು ಅಗ್ನಿಶಾಮಕ ದಳ ಹಾಗೂ ನುರಿತ ಈಜುಗಾರರಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಗುರುವಾರ ಸಂಜೆ ಕೇರಳದ ನಾರಾಯಣ ಯಾನೆ ಬಾಲಕೃಷ್ಣ (47) ಕಾಲುಸಂಕ ದಾಟುವಾಗ ಕಾಲು ಜಾರಿ ಬಿದ್ದು ನೀರುಪಾಲಾಗಿದ್ದರು. ಗುರುವಾರ ಸಂಜೆವರೆಗೆ ನಡೆದ ನಡೆದ ಶೋಧಕಾರ್ಯದಲ್ಲಿ ಅವರ ಸುಳಿವು ಪತ್ತೆಯಾಗಿರಲಿಲ್ಲ. ಶುಕ್ರವಾರ ಮತ್ತೆ ಎನ್‌ಡಿಆ‌ರ್​ಎಫ್ ಹಾಗೂ ಅಗ್ನಿಶಾಮಕ ದಳ ತಂಡದ ಸುಮಾರು 15ರಿಂದ 20 ಮಂದಿ ಆಗಮಿಸಿ ಮೆಷಿನ್ ಬೋಟ್ ಬಳಸಿ ಹುಡುಕಾಟ ನಡೆಸಿದ್ದಾರೆ. ಅಲ್ಲದೇ ಸ್ಥಳೀಯ ಮುಳುಗು ತಜ್ಞರು ಆಗಮಿಸಿ ನೀರಿನಲ್ಲಿ ಹುಡುಕಾಟ ನಡೆಸಿದರು. ಇಂದು ಕೂಡ ಶೋಧ ಕಾರ್ಯ ಮುಂದುವರಿದಿದೆ.

ನೀರು ಪಾಲಾದ ವ್ಯಕ್ತಿ ಕೇರಳದ ಕಾಂಞಂಗಾಡ್ ನವರಾಗಿದ್ದು ಕೂರ್ನಡ್ಕದಲ್ಲಿ ಜೋಸ್‌ ಎಂಬವರಿಗೆ ಸೇರಿದ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸಕ್ಕೆ ಬಂದಿದ್ದರು. ಗುರುವಾರ ಸಂಜೆ ಕೆಲಸ ಮುಗಿಸಿ ಹಿಂತಿರುಗುವ ವೇಳೆ ಕಾಲು ಸಂಕ ದಾಟುತ್ತಿದ್ದಾಗ ಆಯ ತಪ್ಪಿ ಬಿದ್ದು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದರು.

ಸ್ಥಳಕ್ಕೆ ಸಹಾಯಕ ಕಮಿಷನರ್ ಗಿರೀಶ್ ನಂದನ್ ಕುಮಾರ್ ಭೇಟಿ ಪರಿಶೀಲನೆ ನೀಡಿದ್ದಾರೆ. ಸುಳ್ಯ ತಹಸೀಲ್ದಾರ್ ಮಂಜುನಾಥ್, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಸಬ್ ಇನ್‌ಸ್ಪೆಕ್ಟರ್ ಈರಯ್ಯ ದೂಂತೂರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಭಾರಿ ಮಳೆಗೆ ಮೆಸ್ಕಾಂಗೆ 11.28 ಕೋಟಿ ನಷ್ಟ :ಮಳೆಗಾಲ ಆರಂಭವಾದಾಗಿನಿಂದ ಈವರೆಗೆ ಸುರಿದ ಧಾರಾಕಾರ ಮಳೆಗೆ ಮೆಸ್ಕಾಂನ ಸಾಕಷ್ಟು ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಂಭವಿಸಿದ ಹಾನಿಯಿಂದಾಗಿ ಮೆಸ್ಕಾಂಗೆ 11.28 ಕೋಟಿ ರೂ. ನಷ್ಟ ಉಂಟಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 48 ಪರಿವರ್ತಕ, 2,049 ಕಂಬಗಳು, 76.99 ಕಿ.ಮೀ ವಿದ್ಯುತ್ ಲೈನ್​ ಹಾನಿಯಾಗಿವೆ. ಉಡುಪಿ ಜಿಲ್ಲೆಯಲ್ಲಿ 84 ಪರಿವರ್ತಕ, 1,123 ಕಂಬಗಳು, 32.77 ಕಿ.ಮೀ ವಿದ್ಯುತ್ ಲೈನ್​ ಹಾನಿಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 61 ಪರಿವರ್ತಕ, 1,773 ಕಂಬಗಳು, 32.70 ಕಿ.ಮೀ ವಿದ್ಯುತ್ ಲೈನ್​​ ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 4 ಪರಿವರ್ತಕ, 1,939 ಕಂಬಗಳು, 38.78 ಕಿ.ಮೀ ವಿದ್ಯುತ್ ಲೈನ್​​ಗಳು ಹಾನಿಯಾಗಿವೆ.

ಇದನ್ನೂ ಓದಿ :Monsoon Rain: ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ.. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು, ಭೂಮಿ ಕುಸಿತ, ಕಾಲುಸಂಕ ಮುಳುಗಡೆ

Last Updated : Jul 8, 2023, 12:16 PM IST

ABOUT THE AUTHOR

...view details