ಮಂಗಳೂರು (ದಕ್ಷಿಣ ಕನ್ನಡ):ಬಿಜೆಪಿಯವರು ಮಕ್ಕಳಲ್ಲೂ ಕೂಡ ಧರ್ಮದ ವಿಷಬೀಜ ಬಿತ್ತುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ 20ನೇ ಸ್ಥಾನಕ್ಕೆ ಕುಸಿದಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಆರೋಪಿಸಿದರು. ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ನಿಂದ ನಡೆಯುತ್ತಿರುವ ನವಸಂಕಲ್ಪ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಪ್ರತಿ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮೊದಲನೇ, ಎರಡನೇ ಸ್ಥಾನದಲ್ಲಿರುತ್ತಿತ್ತು. ಆದರೀಗ 20ನೇ ಸ್ಥಾನಕ್ಕೆ ಕುಸಿದಿದೆ. ವಿದ್ಯಾರ್ಥಿಗಳಲ್ಲಿ ಧರ್ಮದ ಅಮಲು ಬಿತ್ತಿದ್ದೆ ಈ ಹಿನ್ನೆಡೆಗೆ ಕಾರಣ. ಅವರು ಸೀಟಿ ಊದುತ್ತಾರೆ, ಇವರು ಲಾಠಿ ಹಿಡಿಯುತ್ತಾರೆ. ಅವರ ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಾರೆ. ಉಳಿದವರ ಮಕ್ಕಳನ್ನು ಜೈಲಿಗೆ ಕಳುಹಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಪ್ರಯೋಗಶಾಲೆ ಆಗಿರುವುದರಿಂದ ಈ ರೀತಿಯ ವಾತಾವರಣ ನಿರ್ಮಾಣ ಆಗಿದೆ. ಇದರ ವಿರುದ್ಧ ಕಾಂಗ್ರೆಸ್ ಪಕ್ಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.