ಬೆಳ್ತಂಗಡಿ(ದಕ್ಷಿಣ ಕನ್ನಡ): ಬಿಲ್ ಬಾಕಿ ಕಾರಣ ಮನೆಯೊಂದರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಪವರ್ ಮ್ಯಾನ್ಗಳಿಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಕೊಕ್ಕಡದ ಪವರ್ಮ್ಯಾನ್ಗಳಾದ ದುಂಡಪ್ಪ ಜಂಗಪ್ಪಗೋಳ ಮತ್ತು ಉಮೇಶ್ ಎಂಬುವರ ಮೇಲೆ ವಿದ್ಯುತ್ ಬಿಲ್ ವಿಚಾರವಾಗಿ ಧರ್ಮಸ್ಥಳದ ಅಜುಕುರಿ ನಿವಾಸಿ, ಲಾರಿ ಮಾಲೀಕನಾದ ರಿಜೇಶ್(41) ಎಂಬುವರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 353, 323, 504, 506ರ ಅಡಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇದೀಗ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದ ವಿವರ: ಹತ್ಯಡ್ಕ ಗ್ರಾಮದ ಅಡ್ಕಾಡಿ ನಿವಾಸಿ ದಿ. ಕಾಂತು ಪೂಜಾರಿ ಎಂಬುವರ ಹೆಸರಿನ ವಿದ್ಯುತ್ ಶುಲ್ಕ 3,530 ರೂ. ಇದ್ದು, ಇದನ್ನು ಪಾವತಿಸದ ಹಿನ್ನೆಲೆ ಸೆಪ್ಟೆಂಬರ್ 19ರಂದು ಮಧ್ಯಾಹ್ನ ಪವರ್ಮ್ಯಾನ್ ಉಮೇಶ್ ಅವರು ಕಾಂತು ಪೂಜಾರಿ ಅವರ ಮನೆಗೆ ತೆರಳಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಮನೆ ಅಳಿಯ ಇರಲಿಲ್ಲ. ಗೂಡ್ಸ್ ಲಾರಿ ಚಾಲಕ ರಿಜೀಶ್ಗೆ ಮನೆಯವರು ಫೋನ್ ಮಾಡಿ ಪವರ್ ಮ್ಯಾನ್ ಜೊತೆ ಮಾತನಾಡಲು ಹೇಳಿದ್ದಾರೆ. ಫೋನಿನಲ್ಲಿ ಪವರ್ ಮ್ಯಾನ್ ಉಮೇಶ್ ಅವರಿಗೆ ಕೊಲೆ ಬೆದರಿಕೆಯನ್ನು ಅವರು ಹಾಕಿದ್ದಾರೆ. ಇದನ್ನು ಉಮೇಶ್ ಅವರು ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಬಗ್ಗೆ ಕೊಕ್ಕಡ ಜೆಇ ಕೃಷ್ಣೇಗೌಡ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.