ಕರ್ನಾಟಕ

karnataka

ETV Bharat / state

ಬಿಲ್ ಕಟ್ಟದ ಕಾರಣ ಕರೆಂಟ್ ಕಟ್: ಬೆಳ್ತಂಗಡಿ ಪವರ್​ಮ್ಯಾನ್​ ಮೇಲೆ ಸೋಡಾ ಬಾಟಲಿಯಿಂದ ಹಲ್ಲೆ - ಬಿಲ್ ಕಟ್ಟದ ಕಾರಣ ಕರೆಂಟ್ ಕಟ್

ಬಿಲ್ ಕಟ್ಟದ ಹಿನ್ನೆಲೆ ಪವರ್ ಮ್ಯಾನ್ ಮೇಲೆ ಹಲ್ಲೆ. ಆರೋಪಿ ಪೊಲೀಸ್ ವಶಕ್ಕೆ.

Attack on Belthangadi Powermen
ಬೆಳ್ತಂಗಡಿ ಪವರ್​ಮ್ಯಾನ್​ಗಳಿಗೆ ಹಲ್ಲೆ

By

Published : Sep 23, 2022, 8:28 PM IST

ಬೆಳ್ತಂಗಡಿ: ಬಿಲ್ ಪಾವತಿಸದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಹಿನ್ನೆಲೆ ಪವರ್ ಮ್ಯಾನ್​ಗಳ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಜಂಕ್ಷನ್​ನಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಹಲ್ಲೆ ನಡೆಸಿದಾತನನ್ನು ಹತ್ಯಡ್ಕ ಗ್ರಾಮದ ಅಡ್ಕಾಡಿ ನಿವಾಸಿ ರಿಜೀಶ್ (38) ಎಂದು ಗುರುತಿಸಲಾಗಿದೆ. ಮೆಸ್ಕಾಂ ಪವರ್ ಮ್ಯಾನ್ ದುಂಡಪ್ಪ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೋರ್ವ ಪವರ್ ಮ್ಯಾನ್ ಉಮೇಶ್​ಗೆ ಸಣ್ಣಪುಟ್ಟ ಗಾಯಗಳಾಗಿವೆ.

ಏನಿದು ಪ್ರಕರಣ?:ಹತ್ಯಡ್ಕ ಗ್ರಾಮದ ಅಡ್ಕಾಡಿ ನಿವಾಸಿ ದಿ. ಕಾಂತು ಪೂಜಾರಿ ಎಂಬುವವರ ಹೆಸರಿನ ವಿದ್ಯುತ್ ಶುಲ್ಕ 3,530 ಇದ್ದು, ಇದನ್ನು ಪಾವತಿಸದ ಹಿನ್ನೆಲೆ ಸೆಪ್ಟೆಂಬರ್ 19ರಂದು ಮಧ್ಯಾಹ್ನ ಪವರ್ ಮ್ಯಾನ್ ಉಮೇಶ್ ಅವರು ಕಾಂತು ಪೂಜಾರಿ ಅವರ ಮನೆಗೆ ತೆರಳಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು.

ಬೆಳ್ತಂಗಡಿ ಪವರ್​ಮ್ಯಾನ್​ಗಳಿಗೆ ಹಲ್ಲೆ

ಈ ಸಂದರ್ಭದಲ್ಲಿ ಅವರ ಮೃತರ ಅಳಿಯ ರಿಜೀಶ್ ಮನೆಯಲ್ಲಿ ಇರಲಿಲ್ಲ. ಗೂಡ್ಸ್ ಲಾರಿ ಚಾಲಕರಾಗಿರುವ ರಿಜೀಶ್​ ಅವರಿಗೆ ಮನೆಯವರು ಫೋನ್ ಮಾಡಿ ಪವರ್ ಮ್ಯಾನ್​ಗಳಿಗೆ ಮಾತನಾಡಲು ಹೇಳಿದ್ದರು. ಫೋನ್​ನಲ್ಲಿ ಪವರ್ ಮ್ಯಾನ್ ಉಮೇಶ್​​ಗೆ ಕೊಲೆ ಬೆದರಿಕೆಯನ್ನು ಹಾಕಿದ್ದ. ಇದನ್ನು ಉಮೇಶ್ ಅವರು ಮೇಲಾಧಿಕಾರಿಗಳಿಗೆ ತಿಳಿಸಿದ್ದರು. ಈ ಬಗ್ಗೆ ಕೊಕ್ಕಡ ಜೆಇ ಕೃಷ್ಣೇಗೌಡ ತಾನು ಪರಿಶೀಲಿಸುವುದಾಗಿ ತಿಳಿಸಿದ್ದರು.

ಈ ಮಧ್ಯೆ ಸೆಪ್ಟೆಂಬರ್ 22ರಂದು ದಿ. ಕಾಂತು ಪೂಜಾರಿಯವರ ಮನೆಯವರು ವಿದ್ಯುತ್ ಶುಲ್ಕ ಪಾವತಿಸಿ, ಮರು ಸಂಪರ್ಕವನ್ನು ನೀಡುವಂತೆ ಆದೇಶವನ್ನು ಮೆಸ್ಕಾಂ ಕಚೇರಿಗೆ ತಲುಪಿಸಿದ್ದರು. ಆ ಪ್ರಕಾರ ಪವರ್ ಮ್ಯಾನ್ ಉಮೇಶ್ ಅವರು ದಿ.ಕಾಂತು ಪೂಜಾರಿ ಅವರ ಮನೆಗೆ ಮರು ಸಂಪರ್ಕವನ್ನು ನೀಡಿದ್ದರು.

ಗುರುವಾರ ಸಂಜೆ ಕರ್ತವ್ಯ ಮುಗಿಸಿ ರಾತ್ರಿ ಕೊಕ್ಕಡ ಜಂಕ್ಷನ್​ನಲ್ಲಿ ಉಮೇಶ್ ಹಾಗೂ ಅವರ ಸಹೋದ್ಯೋಗಿಗಳು ದಿನಸಿ ಸಾಮಗ್ರಿಗಳನ್ನು ಖರೀದಿಸುವ ವೇಳೆ ರಿಜೀಶ್, ಉಮೇಶ್ ಯಾರೆಂದು ಪವರ್ ಮ್ಯಾನ್​ಗಳನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭ ಸ್ಥಳದಲ್ಲಿಯೇ ಇದ್ದ ಉಮೇಶ್ ತಾನೇ ಎಂದು ಪರಿಚಯಿಸಿಕೊಂಡಿದ್ದಾರೆ. ಆಗ ಅವಾಚ್ಯ ಶಬ್ದಗಳಿಂದ ಉಮೇಶ್ ಅವರನ್ನು ನಿಂದಿಸಿ ರಿಜೀಶ್ ಹಲ್ಲೆಗೆ ಮುಂದಾದರು.

ಈ ಸಂದರ್ಭ ಸಹೋದ್ಯೋಗಿಯಾದ ಉಪ್ಪಾರಪಳಿಕೆಯ ಪವರ್ ಮ್ಯಾನ್ ದುಂಡಪ್ಪ ಮಧ್ಯಪ್ರವೇಶಿಸಿ ಮಾತುಕತೆ ನಡೆಸಿ ಸಮಾಧಾನ ಪಡಿಸಿದ್ದಾರೆ. ಪರಿಸ್ಥಿತಿ ಶಾಂತಗೊಳಿಸಿ, ತೆರಳುವಾಗ ಪಕ್ಕದಲ್ಲಿ ಇದ್ದ ಸೋಡಾ ಬಾಟಲಿಯಿಂದ ರಿಜೀಶ್, ದುಂಡಪ್ಪ ಅವರ ತಲೆಗೆ ಬಲವಾಗಿ ಹೊಡೆದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣಾ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಹಲ್ಲೆ ನಡೆಸಿದ ಆರೋಪಿಗೆ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ಮೇಲಾಧಿಕಾರಿಗಳು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಬಳ್ಳಾರಿಯಲ್ಲಿ ಯುವಕನ ಮೇಲೆ PFI ಪ್ರತಿಭಟನಾಕಾರರ ಹಲ್ಲೆ.. ವಿಡಿಯೊ ವೈರಲ್​

ABOUT THE AUTHOR

...view details