ಮಂಗಳೂರು: ಇಂದು ಕರಾವಳಿಯಲ್ಲಿ ಆಟಿ ಅಮಾವಾಸ್ಯೆ ಆಚರಿಸಲಾಗುತ್ತಿದೆ. ಇದರ ಪ್ರಯುಕ್ತ ಕರಾವಳಿಯ ಜನರು ಹಾಲೆ (ಸಪ್ತಪರ್ಣಿ) ಮರದ ತೊಗಟೆಯ ಕಷಾಯ ಸೇವನೆ ಮಾಡಿದರು. ಆಷಾಢ ಮಾಸವನ್ನು ಕರಾವಳಿಯಲ್ಲಿ ಅಟಿ ಎಂದು ಕರೆಯಲಾಗುತ್ತದೆ. ಈ ತಿಂಗಳಲ್ಲಿ ತುಳುನಾಡಿನ ಜನರ ಆಹಾರ ಕ್ರಮ ಭಿನ್ನವಾಗಿದ್ದು, ಜೊತೆಗೆ ಆಟಿ ಅಮಾವಾಸ್ಯೆಯ ಆಚರಣೆಯೂ ಅಷ್ಟೇ ವಿಭಿನ್ನವಾಗಿರುತ್ತದೆ.
ಆಟಿ ಅಮಾವಾಸ್ಯೆ ದಿನ ಪಾಲೆ/ಹಾಲೆ ಮರದ ಕಷಾಯ ಕುಡಿಯುವುದು ವಾಡಿಕೆ. ಸಾವಿರದೊಂದು ಬಗೆಯ ಔಷಧೀಯ ಗುಣಗಳಿವೆ ಎಂದು ನಂಬಿರುವ ಈ ಕಷಾಯವನ್ನು ತುಳುನಾಡಿನ ಜನರು ಆಟಿ ಅಮಾವಾಸ್ಯೆಯಂದು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸುತ್ತಾರೆ. ಇದರಿಂದ ಮುಂದಿನ ವರ್ಷದ ಆಷಾಢ ಮಾಸದವರೆಗೂ ಯಾವುದೇ ಕಾಯಿಲೆಗಳು ಹತ್ತಿರ ಸುಳಿಯಲಾರವು ಎಂಬುದು ಇಲ್ಲಿನ ಜನರ ನಂಬಿಕೆ. ಹಿರಿಯರು ಅನುಸರಿಸಿಕೊಂಡು ಬಂದಿರುವ ಈ ಪದ್ಧತಿಗಳನ್ನು ಈಗಲೂ ಶ್ರದ್ಧೆಯಿಂದ ಪಾಲಿಸಿಕೊಂಡು ಬರಲಾಗುತ್ತಿದೆ.