ಮಂಗಳೂರು:ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಕೊಳಂಬೆ ಎಂಬ ಊರು ಮೊನ್ನೆ ಬಂದ ಪ್ರವಾಹಕ್ಕೆ ಅಕ್ಷರಶಃ ನಲುಗಿಹೋಗಿತ್ತು. ಈ ಭಾಗದ ಸುಮಾರು 20 ಮನೆಗಳನ್ನು ಭೀಕರ ಪ್ರವಾಹ ಆಪೋಶನ ಪಡೆದಿತ್ತು. ಸೂರು ಕಳೆದುಕೊಂಡು ಇಲ್ಲಿನ ಕುಟುಂಬಗಳು ಬೀದಿಪಾಲಾಗಿತ್ತು. ಆದರೆ ಈ ದುಃಖದ ನಡುವೆಯೇ ಬದುಕು ನೀಡುವ ಭರವಸೆಯ ಕೈಗಳು ಈ ಕುಟುಂಬಗಳ ನೋವಿಗೆ ಸಾಂತ್ವನ ಹೇಳಿದೆ.
ಹೌದು, ಒಂದಿಷ್ಟು ಉತ್ಸಾಹಿ ಯುವಕರ ತಂಡಗಳು ಒಂದಾಗಿ ಈ ಕೊಳಂಬೆ ಎಂಬ ಊರನ್ನು ಮತ್ತೆ ಮೂರು ತಿಂಗಳೊಳಗೆ ಮರು ನಿರ್ಮಾಣ ಮಾಡುವ ಛಲದೊಂದಿಗೆ ಇಂದಿನಿಂದಲೇ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಮುಂದಿನ ಪ್ರತೀ ಭಾನುವಾರ ಇಲ್ಲಿ ಈ ಯುವಕರ ತಂಡವು ಶ್ರಮದಾನದ ಮೂಲಕ ತಾವು ಉದ್ದೇಶಿಸಿದ ಕಾರ್ಯವನ್ನು ನೆರವೇರಿಸಲಿದೆ. ಅಲ್ಲದೆ ದಾನಿಗಳ ನೆರವಿನಿಂದ ಇಲ್ಲಿನ ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣ ಪರಿಕರ, ವಿದ್ಯುತ್ ಉಪಕರಣಗಳು, ಅಡುಗೆ ವಸ್ತುಗಳು, ಬಟ್ಟೆಗಳು, ಗ್ಯಾಸ್ ಗಳ ವ್ಯವಸ್ಥೆ ಮಾಡಲಿದೆ.
ಉಜಿರೆ ಲಕ್ಷ್ಮೀ ಗ್ರೂಪ್ ನ ಮೋಹನ್ ಕುಮಾರ್, ಉಜಿರೆ ಸಂಧ್ಯಾ ಟ್ರೇಡರ್ಸ್ ನ ರಾಜೇಶ್ ಪೈ ಮುಂದಾಳತ್ವದಲ್ಲಿ ಛತ್ರಪತಿ ಶಿವಾಜಿ ಘಟಕ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಸಂಗಮ ಯುವಕ ಮಂಡಳಿ, ವೀರಕೇಸರಿ ಕಲ್ಮಂಜ, ಶ್ರೀ ಸತ್ಯನಾರಾಯಣ ಭಜನಾ ಮಂಡಳಿ, ಒಕ್ಕಲಿಗರ ಸೇವಾ ಸಮಿತಿ ಉಜಿರೆ ಸೇರಿದಂತೆ 40 ಕ್ಕೂ ಅಧಿಕ ಉದ್ಯಮಿಗಳ ತಂಡ ಹಾಗೂ ಸುಮಾರು 330 ಸ್ವಯಂಸೇವಕರ ತಂಡವು ಸ್ವಯಂಪ್ರೇರಿತವಾಗಿ ಈ ಮಹತ್ಕಾರ್ಯದಲ್ಲಿ ಕೈ ಜೋಡಿಸಲಿದೆ.
ಇಂದು ಬೆಳಗ್ಗೆ ಈ ಕಾರ್ಯಕ್ಕೆ ಚಾಲನೆ ದೊರಕಿದ್ದು, ಮೊದಲಿಗೆ ಮನೆ ಸ್ವಚ್ಛತೆ, ರಾಶಿಬಿದ್ದ ತ್ಯಾಜ್ಯ, ಮಣ್ಣು, ಮರಗಳ ತೆರವು, ಗದ್ದೆಗಳಲ್ಲಿ ತುಂಬಿರುವ ಹೂಳಗಳನ್ನು ತೆಗೆಯುವುದು, ವಿದ್ಯುತ್ ಸಲಕರಣೆಗಳ ಮರುಜೋಡಣೆ ಇತ್ಯಾದಿ ಕಾರ್ಯಗಳು ನಡೆದವು. ಅಲ್ಲದೆ ಕೃಷಿ ಭೂಮಿಗಳನ್ನು ಮತ್ತೆ ಫಲವತ್ತತೆ ಗೊಳಿಸಲು ಗದ್ದೆಯನ್ನು ಉತ್ತು ಬಿತ್ತಲಾಗುವುದು. ತೋಟಗಳ ಮರು ನಿರ್ಮಾಣ, ರಬ್ಬರ್ ಮರಗಳು ನಾಶವಾದಲ್ಲಿ ಮತ್ತೆ ಗಿಡಗಳನ್ನು ನೆಟ್ಟು ಪೋಷಣೆ, ಜಾನುವಾರು ಕಳೆದುಕೊಂಡವರಿಗೆ ಜಾನುವಾರು ವ್ಯವಸ್ಥೆ ಹೀಗೆ ಸಂತ್ರಸ್ತರನ್ನು ಮತ್ತೆ ಸದೃಢರನ್ನಾಗಿಸಲು ಬೇಕಾಗುವ ಎಲ್ಲಾ ವ್ಯವಸ್ಥೆ ಮಾಡಲು ಈ ತಂಡ ಕಾರ್ಯಸನ್ನದ್ಧಗೊಂಡಿದೆ.
ಈ ಕಾರ್ಯಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶ್ಲಾಘಿಸಿ ಡಿಎಂಸಿ ಕನ್ಸ್ಟ್ರಕ್ಷನ್ನಿಂದ ಅಗತ್ಯ ಯಂತ್ರೋಪಕರಣಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ. ಅಲ್ಲದೆ ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ.ಹರ್ಷೇಂದ್ರ ಕುಮಾರ್, ಡಾ.ಬಿ.ಯಶೋವರ್ಮ ಹಾಗೂ ಶಾಸಕ ಹರೀಶ್ ಪೂಂಜಾ ಮಾರ್ಗದರ್ಶನ ಒದಗಿಸಲಿದ್ದಾರೆ.
ಈ ಸಂದರ್ಭ ತಂಡದ ಮೋಹನ್ ಕುಮಾರ್ ಮಾತನಾಡಿ, ಕೊಳಂಬೆ ಪ್ರದೇಶ ಪ್ರವಾಹದಿಂದ ಸಂಪೂರ್ಣ ನಾಶವಾಗಿದ್ದು, ಇಲ್ಲಿನ ಪರಿಸ್ಥಿತಿ ಸುಧಾರಿಸಲು ಮನೆ ಸ್ವಚ್ಛಗೊಳಿಸಿ, ಮನೆಯ ಪುನರ್ನಿರ್ಮಾಣ ಮಾಡುವುದರಿಂದ ಮಾತ್ರ ಸಾಧ್ಯವಾಗುವುದಿಲ್ಲ. ಇಲ್ಲಿನ ಗದ್ದೆ, ತೋಟಗಳಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಬೇಕು. ಇದನ್ನು ದಾನಿಗಳ ಸಹಾಯದಿಂದ ಮಾಡಲಾಗುತ್ತದೆ. ಮುಂದಿನ ಮೂರು ತಿಂಗಳಲ್ಲಿ ಈ ಕಾರ್ಯವನ್ನು ನೆರವೇರಿಸಲಾಗುತ್ತದೆ ಎಂದು ಹೇಳಿದರು.