ಬಂಟ್ವಾಳ: ಆರ್ಡ್ರ್ ಮಾಡಿದ್ದ ವಸ್ತುವನ್ನು ಡೆಲಿವರಿ ನೀಡಲು ಹೋಗಿದ್ದ ಡೆಲಿವರಿ ಬಾಯ್ಗೆ ವ್ಯಕ್ತಿಯೊಬ್ಬ ಹೊಡೆದು ಹಲ್ಲೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಬಿ ಕಸಬಾ ಗ್ರಾಮದಲ್ಲಿ ನಡೆದಿದೆ. ಗುರು ಪ್ರಸಾದ್ ಎಂಬಾತ ಹಲ್ಲೆಗೊಳಗಾದವರು. ಗುರು ಪ್ರಸಾದ್ ಬಂಟ್ವಾಳ ನಗರ ಠಾಣಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.
ನಾನು ಡೆಲಿವರಿ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಶುಕ್ರವಾರ ಸಂಜೆ ಬಿ ಕಸಬಾ ಗ್ರಾಮದ ಅಂಚೆ ಕಚೇರಿ ಬಳಿ ಇರುವ ಫ್ಲಾಟ್ ನಂಬರ್ 303ಕ್ಕೆ ಆನ್ಲೈನ್ ವಸ್ತು ಡೆಲಿವರಿ ಮಾಡಲು ಹೋದಾಗ ತೌಸಿಫ್ ಎಂಬಾತ ತಡೆದು ನಿಲ್ಲಿಸಿದ್ದಾನೆ. ನೀನು ಯಾಕೆ ಇಲ್ಲಿಗೆ ಬಂದಿದ್ದೀಯಾ ಎಂದು ಕೇಳಿ ಎಡ ಕುತ್ತಿಗೆಗೆ, ಮುಖಕ್ಕೆ ಕೈಯಿಂದ ಹೊಡೆದದ್ದು ಮಾತ್ರವಲ್ಲದೆ, ಹೆಲ್ಮೆಟ್ ತೆಗೆದುಕೊಂಡು ಕುತ್ತಿಗೆ ಬಳಿ, ಮುಖಕ್ಕೆ ಹೊಡೆದಿದ್ದಾನೆ. ನಂತರ ಶರ್ಟ್ ಹಿಡಿದು ಸೊಂಟಕ್ಕೆ ಕಾಲಿನಿಂದ ತುಳಿದು, ಹೊಡೆದಿದ್ದಾರೆ. ಬಳಿಕ ರಸ್ತೆಗೆ ಎಳೆದುಕೊಂಡು ಹೋಗಿ, ಹೊಡೆದು ಸಾಯಿಸುವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಗುರು ಪ್ರಸಾದ್ ಉಲ್ಲೇಖಿಸಿದ್ದಾರೆ.
ಹಲ್ಲೆಗೊಳಗಾದ ಗುರು ಪ್ರಸಾದ್ ಚಿಕಿತ್ಸೆಗಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ 341, 504, 323, 324, 505 ಐಪಿಸಿಯಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲಸದ ವೇಳೆ ಆಯ ತಪ್ಪಿ ಬಿದ್ದು ಗಂಭೀರ ಗಾಯ - ಚಿಕಿತ್ಸೆ ಫಲಕಾರಿಯಾಗದೆ ಸಾವು:ಪೈಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿಗಿದ್ದ ವ್ಯಕ್ತಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸೋರ್ನಾಡು ಎಂಬಲ್ಲಿ ನಡೆದಿದೆ.
ಜಕ್ರಿಬೆಟ್ಟು ಪಲ್ಲಿಕಂಡ ನಿವಾಸಿ ರಾಬರ್ಟ್ ವೇಗಸ್ (51) ಮೃತ ವ್ಯಕ್ತಿ. ವಿಜಯ್ ಎಂಬ ಪೈಂಟಿಂಗ್ ಗುತ್ತಿಗೆದಾರರ ಜೊತೆ ರಾಬರ್ಟ್ ವೇಗಸ್ ಅವರು ಪೈಂಟಿಂಗ್ ಕೆಲಸ ಮಾಡುತ್ತಿದ್ದು, ಸೋರ್ನಾಡು ಎಂಬಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸುಮಾರು 1 ಗಂಟೆ ವೇಳೆಗೆ ಆಕಸ್ಮಿಕವಾಗಿ ಮೇಲಿನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗಂಭೀರವಾಗಿ ಗಾಯಗೊಂಡ ರಾಬರ್ಟ್ ಅವರು ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ವೇಳೆ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಖಲೆಗಳಿಲ್ಲದೆ ಅಕ್ಕಿ ಸಾಗಾಟ - ಲಾರಿ ಸಮೇತ ಅಕ್ಕಿ ವಶಕ್ಕೆ ಪಡೆದ ಪೊಲೀಸರು:ದಾಖಲೆಗಳಿಲ್ಲದೆ ಅಕ್ಕಿ ಸಾಗಿಸುತ್ತಿದ್ದ ಲಾರಿ ಸಹಿತ ಲಕ್ಷಾಂತರ ರೂ. ಮೌಲ್ಯದ ಅಕ್ಕಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಫರಂಗಿಪೇಟೆಯಲ್ಲಿ ವಶಕ್ಕೆ ಪಡೆದುಕೊಂಡು, ಪ್ರಕರಣ ದಾಖಲಿಸಿದ್ದಾರೆ. ಲಾರಿ ಚಾಲಕ ಬೆಂಗಳೂರು ನೆಲಮಂಗಲ ನಿವಾಸಿ ಸುನಿಲ್ ಎಂಬಾತನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
50 ಕೆ.ಜಿ. ತೂಕದ 300 ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಒಟ್ಟು ಆರು ಲಕ್ಷ ಮೌಲ್ಯದ 15,000 ಕೆ.ಜಿ. ಅಕ್ಕಿಯನ್ನು ಹಾಗೂ ಸುಮಾರು 7 ಲಕ್ಷ ಮೌಲ್ಯದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಫರಂಗಿಪೇಟೆ ಎಂಬಲ್ಲಿ ಮಾ.31 ರಂದು ರಾತ್ರಿ 8 ಗಂಟೆ ವೇಳೆಗೆ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ವಾಹನಗಳ ತಪಾಸಣೆ ನಡೆಸುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಫರಂಗಿಪೇಟೆಯಲ್ಲಿ ಲಾರಿಯನ್ನು ತಡೆದು ತಪಾಸಣೆ ನಡೆಸುತ್ತಿದ್ದಾಗ ಲಾರಿಯೊಳಗಿದ್ದ ಅಕ್ಕಿ ಲೋಡ್ಗೆ ಯಾವುದೇ ದಾಖಲೆಗಳಿಲ್ಲದ ಹಿನ್ನೆಲೆಯಲ್ಲಿ ದೂರು ದಾಖಲಿಸಿ ಪ್ರಕರಣ ದಾಖಲಿಸಲಾಗಿದೆ.
ಇದನ್ನು ಓದಿ:ಚೆಕ್ ಪೋಸ್ಟ್ ತಪಾಸಣೆ: ಶಿವಮೊಗ್ಗದಲ್ಲಿ 1.40 ಕೋಟಿ ಹಣ, ಲಕ್ಷಾಂತರ ರೂ. ಮೌಲ್ಯದ ಅಕ್ಕಿ ವಶ