ಸುಬ್ರಹ್ಮಣ್ಯ (ದಕ್ಷಿಣ ಕನ್ನಡ):ಹುಡುಗಿಯೊಂದಿಗೆ ಇದ್ದ ಬೇರೆ ಸಮುದಾಯದ ಯುವಕನಿಗೆ ಕೆಲವರು ಥಳಿಸಿದ್ದು, ಯುವಕ ಆಸ್ಪತ್ರೆಗೆ ದಾಖಲಾದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಈ ಯುವಕನ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣವೂ ದಾಖಲಾಗಿದೆ. ಅಲ್ಲದೇ, ವಿದ್ಯಾರ್ಥಿನಿ ಜೊತೆ ತಿರುಗಾಡುತ್ತಿದ್ದ ಎಂದು ಯುವಕನಿಗೆ ಕೆಲವರು ಸೇರಿಕೊಂಡು ಥಳಿಸಿ, ಕೊಲೆ ಯತ್ನ ನಡೆಸಿದ್ದಾರೆ ಎಂದು ಕೂಡ ದೂರು ನೀಡಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಬಸ್ ನಿಲ್ದಾಣದ ಬಳಿ ನಿಂತಿರುವಾಗ ಬಂದ ಗುಂಪು, ಯುವಕನನ್ನು ಕುಮಾರಧಾರ ಬಳಿ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸುಮಾರು 10-12 ಜನರಿದ್ದ ಗುಂಪು ತನ್ನನ್ನು ಸುತ್ತುವರಿದು ಗಂಭೀರ ಹಲ್ಲೆ ನಡೆಸಿದೆ. ಕೈ, ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ, ಚಾಕುವಿನಿಂದ ಇರಿದು ಕೊಲ್ಲಲು ಯತ್ನಿಸಲಾಗಿದೆ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವಕ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಗೊಳಗಾದ ಯುವಕ ಸುಳ್ಯ ಸಮೀಪದ ಗ್ರಾಮವೊಂದರ ನಿವಾಸಿ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ಈತ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ, ಸುಬ್ರಹ್ಮಣ್ಯ ಠಾಣೆಯಲ್ಲಿ ಕಲಂ 323, 324, 307, 365, 143, 147 ಜೊತೆಗೆ 149 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.
ಪ್ರತಿದೂರು:ಹಲ್ಲೆಗೊಳಗಾದ ಯುವಕನ ದೂರಿನ ನಡುವೆ ಯುವತಿಯ ತಂದೆಯೂ ಸಹ ಯುವಕನ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುವಕನ ವಿರುದ್ಧ ಪೋಕ್ಸೋ ಸೇರಿದಂತೆ ಇತರ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ತನ್ನ 17 ವರ್ಷದ ಮಗಳು ಕಾಲೇಜು ಮುಗಿಸಿ ಮನೆಗೆ ಹಿಂತಿರುಗಲು ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ನಿಂತಿದ್ಧಾಗ ಆರೋಪಿಯು ಆಕೆಗೆ ತನ್ನನ್ನು ಪ್ರೀತಿಸುವಂತೆ ಒತ್ತಡ ಹಾಕಿದ್ದಾನೆ. ಮಗಳ ಬಳಿ ದೂರವಾಣಿ ಸಂಖ್ಯೆ ನೀಡುವಂತೆ ಕೇಳಿದ್ದಾನೆ. ಕೊಡಲು ನಿರಾಕರಿಸಿದ್ದಕ್ಕೆ ಅವಳ ಕೈ ಹಿಡಿದು ಎಳೆದಾಡಿ ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಮಗಳು ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದಾಳೆ. ಆಕರ ವಿಚಲಿತಳಾಗಿರುವುದು ಕಂಡು ವಿಚಾರಿಸಿದಾಗ ಭಯಗೊಂಡು ತಡವಾಗಿ ಈ ಬಗ್ಗೆ ತಿಳಿಸಿದ್ದಾಳೆ. ಹೀಗಾಗಿ ಅಪ್ರಾಪ್ತ ಮಗಳಿಗೆ ಪ್ರೀತಿಸುವಂತೆ ಒತ್ತಡ ಹಾಕಿ, ಬೆದರಿಕೆ ಹಾಕಿರುವ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವತಿಯ ತಂದೆ ದೂರು ನೀಡಿದ್ದಾರೆ. ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಕಲಂ: 354(ಬಿ), 506 ಐಪಿಸಿ, ಕಲಂ: 12 ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.