ಪುತ್ತೂರು:ಪ್ರಕರಣವೊಂದರ ವಿಚಾರಣೆ ವೇಳೆ ಮಹಿಳೆಯೊಬ್ಬರು ತನ್ನ ಗಂಡನಿಗೆ ಹಲ್ಲೆ ನಡೆಸಲು ಮುಂದಾದಾಗ, ತಡೆಯಲು ಹೋದ ಎಸ್ಐ ಮೇಲೆ ಸಹೋದರಿಯರು ಹಲ್ಲೆ ನಡೆಸಿದ ಘಟನೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮಹಿಳಾ ಠಾಣೆಯ ಎಸ್ಐ ಶೇಷಮ್ಮ ಹಲ್ಲೆಗೊಳಗಾದವರು. ಸಾಲ್ಮರ ಮುದ್ದೋಡಿ ನಿವಾಸಿ ಲಾರೆನ್ಸ್ ಡಿಸೋಜಾ ಅವರ ಪತ್ನಿ ಬೇಬಿ ಡಿಸೋಜಾ(34) ಮತ್ತು ಹಾಸನ ಚೆನ್ನರಾಯಪಟ್ಟಣದ ನುಗ್ಗೆಹಳ್ಳಿ ನೆಟ್ಟಕೆರೆ ಗೋಪಾಲ ಎಂಬುವರ ಪತ್ನಿ ಆಶಾ (35 ) ಹಲ್ಲೆ ನಡೆಸಿದ ಆರೋಪಿಗಳು.
ಘಟನೆ ವಿವರ:
ಫೆ. 28ರಂದು ಸಂಬಂಧಿ ಬೇಬಿ ಡಿಸೋಜಾ ಹಾಗೂ ಆಕೆಯ ಸಂಬಂಧಿ ಸುನಿತಾ ಡಿಸೋಜಾ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದರು. ಈ ದೂರಿನ ವಿಚಾರಣೆಗಾಗಿ ಅವರಿಬ್ಬರನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಈ ವೇಳೆ ಬೇಬಿ ಡಿಸೋಜಾ ಅಕ್ಕ ಆಶಾ ಕೂಡಾ ಜೊತೆಗೆ ಬಂದಿದ್ದರು.
ಎಸ್ಐ ಶೇಷಮ್ಮ ಅವರು, ಇವರಿಬ್ಬರ ಕುಟುಂಬ ಸಮಸ್ಯೆಯನ್ನುವಿಚಾರಿಸುತ್ತಿದ್ದ ವೇಳೆ ಬೇಬಿ ಡಿಸೋಜಾ ತನ್ನ ಪತಿ ಲಾರೆನ್ಸ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಇದನ್ನು ಗಮನಿಸಿದ ಎಸ್ಐ, ಹಲ್ಲೆ ನಡೆಯುವುದನ್ನು ತಪ್ಪಿಸಿದರು.
ಈ ವೇಳೆ ಬೇಬಿ ಡಿಸೋಜಾ ಮತ್ತು ಆಕೆಯ ಅಕ್ಕ ಆಶಾ, ಎಸ್.ಐ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ಕುರಿತು ಮಹಿಳಾ ಠಾಣೆಯ ಸಿಬ್ಬಂದಿಯೊಬ್ಬರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಬೇಬಿ ಡಿಸೋಜಾ ಮತ್ತು ಆಶಾ ಎಂಬವರುನ್ನು ಪೊಲೀಸರು ಬಂಧಿಸಿದ್ದಾರೆ.