ಕರ್ನಾಟಕ

karnataka

‘ಆಪತ್ಬಾಂಧವ’ ಆಸೀಫ್​ರ ಮಾನವೀಯ ಕಾರ್ಯ: ಮಾನಸಿಕ ಅಸ್ವಸ್ಥನ ನೆಲೆ ಪತ್ತೆ!

By

Published : Sep 10, 2020, 8:17 AM IST

ಮಂಗಳೂರಿನ ರಥ ಬೀದಿಯಲ್ಲಿ ಕಳೆದ ಮೂರು ವರ್ಷಗಳಿಂದ ಜನರಿಗೆ ಮತ್ತು ಅಂಗಡಿಗಳ ಮೇಲೆ ಕಲ್ಲೆಸೆಯುತ್ತಾ ಭೀತಿ ಸೃಷ್ಟಿಸುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನ ನೆಲೆ ಕೊನೆಗೂ ತಿಳಿದು ಬಂದಿದೆ.

Mangalore
ಮಾನಸಿಕ ಅಸ್ವಸ್ಥನ ನೆಲೆ ಪತ್ತೆ

ಮಂಗಳೂರು: ನಗರದ ಮುಲ್ಕಿಯ ಕಾರ್ನಾಡುವಿನ ಮೈಮುನಾ ಫೌಂಡೇಶನ್ ಆಪತ್ಬಾಂಧವ ಆಸೀಫ್ ಅವರ ಮಾನವೀಯ ಕಾರ್ಯದಿಂದ ಮಾನಸಿಕ ಅಸ್ವಸ್ಥನೋರ್ವನ ಮನೆಯವರಿಗೆ ಮಾಹಿತಿ ಲಭಿಸಿದ್ದು, ಸೆ. 10ರಂದು ರಾಜಸ್ಥಾನದಿಂದ ಆತನ ಸಂಬಂಧಿಕರು ಆಗಮಿಸಿ ಕರೆದೊಯ್ಯಲಿದ್ದಾರೆ.

ಆಪತ್ಬಾಂಧವ’ ಆಸೀಫ್​ರ ಮಾನವೀಯ ಕಾರ್ಯ: ಮಾನಸಿಕ ಅಸ್ವಸ್ಥನ ನೆಲೆ ಪತ್ತೆ

ನಗರದ ರಥ ಬೀದಿಯಲ್ಲಿ ಮೂರು ವರ್ಷಗಳಿಂದ ಜನರಿಗೆ ಮತ್ತು ಅಂಗಡಿಗಳ ಮೇಲೆ ಕಲ್ಲೆಸೆಯುತ್ತಾ ಭೀತಿ ಸೃಷ್ಟಿಸುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನ ನೆಲೆ ಕೊನೆಗೂ ತಿಳಿದು ಬಂದಿದೆ. ಸುಮಾರು 32 ವರ್ಷದ ಮಾನಸಿಕ ಅಸ್ವಸ್ಥ ಯುವಕನ ಉಪದ್ರವದಿಂದ ಜನರು ರೋಸಿ ಹೋಗಿದ್ದರು. ಅನೇಕ ಬಾರಿ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಬಂದು ಕರೆದುಕೊಂಡು ಹೋದರೂ, ಪೆಟ್ಟು ಕೊಟ್ಟರೂ ಆತ ಮತ್ತೆ ಬಂದು ಅದೇ ಜಾಗದಲ್ಲಿ ಸುತ್ತುತ್ತಾ, ಜನರು ಏನಾದರೂ ಕೊಟ್ಟರೆ ತಿನ್ನುತ್ತಾ ದೇವಸ್ಥಾನದ ಜಗಲಿಯಲ್ಲಿ ಮಲಗುತ್ತಿದ್ದ.

ಒಂದು ಬಾರಿ ಆತನ ಬಗ್ಗೆ ಏನಾದರೂ ಮಾಡಿ ಎಂದು ಬಂದರು ಪ್ರದೇಶದ ಸಲಾಮ್ ಎಂಬುವರಿಗೆ ಕಾಳಿಕಾಂಬ ಕೋಲ್ಡ್ ಹೌಸ್‌ನ ನಾರಾಯಣ ತಿಳಿಸಿದ್ದರು. ಸಲಾಮ್ ಅವರು ಮೂಲ್ಕಿ ಕಾರ್ನಾಡುವಿನ ಮೈಮುನಾ ಫೌಂಡೇಶನ್ ಆಪತ್ಬಾಂಧವ ಸೈಕೋ ರಿಹ್ಯಾಬಿಲಿಟೇಶನ್ ಸೆಂಟರ್‌ನ ಆಸೀಫ್ ಆಪತ್ಬಾಂಧವ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಆ. 8ರಂದು ಸ್ಥಳಕ್ಕೆ ಆಗಮಿಸಿದ ಆಸೀಫ್ ಮತ್ತು ಅಲ್ತಾಬ್, ಸ್ಥಳೀಯರ ನೆರವಿನಿಂದ ಅಲ್ಲೇ ಆ ಮಾನಸಿಕ ಅಸ್ವಸ್ಥನ ಕೂದಲು ಬೋಳಿಸಿ, ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ತಮ್ಮ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದಿದ್ದರು.

‘ಆಪತ್ಬಾಂಧವ’ ಆಸೀಫ್​ರ ಮಾನವೀಯ ಕಾರ್ಯ: ಮಾನಸಿಕ ಅಸ್ವಸ್ಥನ ನೆಲೆ ಪತ್ತೆ

ಅಲ್ಲಿ ಆತನಿಗೆ ‘ರಾಜು’ ಎಂಬ ನಾಮಕರಣ ಮಾಡಿದ್ದರು. ಎರಡು ದಿನ ತಮ್ಮ ಕೇಂದ್ರದಲ್ಲಿಟ್ಟ ಬಳಿಕ ನಿಯಮದಂತೆ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಆರಂಭಿಸಲಾಗಿತ್ತು. ಸುಮಾರು ಒಂದು ತಿಂಗಳು ಮಾನಸಿಕವಾಗಿ ಚೇತರಿಕೊಂಡ ರಾಜು, ತನ್ನ ಹಳೆಯ ಕಥೆಯನ್ನೆಲ್ಲ ನೆನಪಿಸಿಕೊಂಡಿದ್ದ. ಮನೆಯವರ ಬಗ್ಗೆ ಯೋಚಿಸಿ ಅಳತೊಡಗಿದ್ದ. ಕೇಂದ್ರದ ವಾರ್ಡನ್ ನೆರವಿನಿಂದ ಮೊಬೈಲ್ ಮೂಲಕ ತನ್ನ ಮನೆಗೆ ಫೋನ್ ಮಾಡಿಸಿದ್ದಾನೆ.

ಆತನ ಇರುವಿಕೆ ಬಗ್ಗೆ ತಿಳಿದ ತಕ್ಷಣ, ಮನೆಯವರು ಮಂಗಳೂರಿನಲ್ಲಿರುವ ರಾಜಸ್ಥಾನದ ಮಾರ್ವಾಡಿ ಸಮುದಾಯದವರಿಗೆ ಮಾಹಿತಿ ನೀಡಿದ್ದಾರೆ. ಅವರು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದ್ದಾರೆ. ಇದು ರಾಜಸ್ಥಾನದ ಪ್ರತಿಷ್ಠಿತ ಕುಟುಂಬ. ಈ ರಾಜುವಿನ ಅಸಲಿ ಹೆಸರು ‘ಮಹೇಶ್’. ಪದವಿ ಶಿಕ್ಷಣ ಪಡೆದು, ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದ. ಯಾವುದೋ ಸಣ್ಣ ವಿಚಾರದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ. ಹಾಗೆ ಮೂರೂವರೆ ವರ್ಷದ ಹಿಂದೆ ಮುಂಬೈಯಿಂದ ನಾಪತ್ತೆಯಾಗಿದ್ದ. ಆತನನ್ನು ಹುಡುಕಲು ಮನೆಯವರು ಬಹಳಷ್ಟು ಪ್ರಯತ್ನ ಮಾಡಿದರ ಸಫಲರಾಗಿರಲಿಲ್ಲ. ಆತನ ಬರುವಿಕೆಗಾಗಿ ಕಾಯುತ್ತಿದ್ದರು ಎಂದು ತಿಳಿದು ಬಂದಿದೆ.

ಆಸೀಫ್ ಆಪತ್ಬಾಂಧವ ಅವರ ಸಕಾಲಿಕ ಸಹಾಯ, ವೈದ್ಯಕೀಯ ಚಿಕಿತ್ಸೆಯಿಂದ ಮಹೇಶನೆ ಕರೆ ಮಾಡಿ ಹೇಳಿದ ತಕ್ಷಣ, ಬುಧವಾರವೇ ಮಂಗಳೂರಿಗೆ ಬರಲು ಆತನ ತಂದೆ ಮತ್ತು ಸಹೋದರ ಸಿದ್ಧರಾಗಿದ್ದಾರೆ. ಗುರುವಾರ ಬೆಳಗ್ಗೆ 11 ಗಂಟೆ ವೇಳೆಗೆ ಇಬ್ಬರೂ ವಿಮಾನದ ಮೂಲಕ ಮಂಗಳೂರಿನ ಬಂದರು ಪೊಲೀಸ್ ಠಾಣೆಗೆ ಬರಲಿದ್ದಾರೆ. ಇನ್ಸ್​​​ಪೆಕ್ಟರ್ ಗೋವಿಂದರಾಜು ಅವರ ಸಮ್ಮುಖದಲ್ಲಿ ಮಹೇಶನ ಹಸ್ತಾಂತರ ನಡೆಯಲಿದೆ. ಬಳಿಕ ಅವರನ್ನು ಆಶ್ರಮಕ್ಕೆ ಕರೆದೊಯ್ಯಲಾಗುತ್ತದೆ. ನಂತರ ಮಹೇಶನ ಭಾವನಾತ್ಮಕ ಬೀಳ್ಕೊಡುಗೆಗೆ ಮೈಮುನಾ ಸೆಂಟರ್ ಸಾಕ್ಷಿಯಾಗಲಿದೆ.

ABOUT THE AUTHOR

...view details