ಕಾರವಾರ(ಉತ್ತರ ಕನ್ನಡ):ಗಣರಾಜ್ಯೋತ್ಸವಧ್ವಜಾರೋಹಣದಲ್ಲಿ ಭಾಗಿಯಾದ ಬಳಿಕ ಇಲ್ಲಿನ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಾರವಾರದಲ್ಲಿ ಇಂದು ನಡೆದಿದೆ.
ನಗರದ ಸಂಚಾರಿ ಠಾಣೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಬ್ದುಲ್ ಖಾದರ್ ಮಹ್ಮದ್ ಶೇಖ್ (57) ಮೃತ ಅಧಿಕಾರಿ. ಸಂಚಾರಿ ಠಾಣೆಯಲ್ಲಿ ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಧ್ವಜಾರೋಹಣದ ಕೆಲ ಸಮಯದ ಬಳಿಕ ಎಎಸ್ಐ ಮಹ್ಮದ್ ಶೇಖ್ ಅವರಲ್ಲಿ ಎದೆನೋವು ಕಾಣಿಸಿಕೊಂಡು ಠಾಣೆಯಲ್ಲಿಯೇ ಕುಸಿದುಬಿದ್ದಿದ್ದಾರೆ.
ತಕ್ಷಣ ಅವರನ್ನು ಮೆಡಿಕಲ್ ಕಾಲೇಜಿಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅಬ್ದುಲ್ ಖಾದರ್ ಮಹ್ಮದ್ ಶೇಖ್ 1992 ರಲ್ಲಿ ಪೊಲೀಸ್ ಕಾನಸ್ಟೇಬಲ್ ಆಗಿ ಪೊಲೀಸ್ ಇಲಾಖೆಯಲ್ಲಿ ಭರ್ತಿಯಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ದಾಂಡೇಲಿ ಗ್ರಾಮೀಣ, ದಾಂಡೇಲಿ ನಗರ, ಜೊಯಿಡಾ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.