ಮಂಗಳೂರು:ಎಂಸಿಎಫ್ ರಸಗೊಬ್ಬರ ತಯಾರಿಕಾ ಕಂಪನಿಯು ಸಾಮಾಜಿಕ ಬದ್ಧತಾ ಕಾರ್ಯದಡಿ ತನ್ನ ಅನುದಾನವನ್ನು ಮಾನವೀಯ ನೆಲೆಯಲ್ಲಿ ಜನರ ಬಾಳಿನಲ್ಲಿ ಧೈರ್ಯ ತುಂಬುವಂತಹ ಕೆಲಸ ಮಾಡುತ್ತಿದೆ. ಕಂಪನಿಯ ಲಾಭಂಶದ ಒಂದು ಭಾಗವನ್ನು ಕೃತಕ ಅಂಗಾಗ ಜೋಡಣೆಯಂತಹ ಕಾರ್ಯಕ್ರಮಗಳಿಗೆ ನೀಡುತ್ತಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.
ಪಣಂಬೂರು ಎಂಸಿಎಫ್ನಲ್ಲಿ ಮಂಗಳವಾರ ನಡೆದ ಕೃತಕ ಅಂಗಾಂಗ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರು ಹಲವಾರು ಅಭಿವೃದ್ಧಿ ಕೆಲಸಗಳಿಗಾಗಿ ಬೇಡಿಕೆ ಸಲ್ಲಿಸುತ್ತಲೇ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಕ್ಷೇತ್ರ ಪ್ರವಾಸದ ವೇಳೆ ಅಥವಾ ಕಚೇರಿಗೆ ಬಂದು ದಿವ್ಯಾಂಗರು ಕೃತಕ ಅಂಗಾಗ ನೀಡುವಂತೆ ಮನವಿ ಸಲ್ಲಿಸುತ್ತಿದ್ದಾಗ ಗುಣಮಟ್ಟದ ಸಲಕರಣೆ ವಿತರಿಸಲು ಎಂಸಿಎಫ್ಗೆ ಮನವಿ ಮಾಡಿದ್ದೆ. ಈ ಮೇರೆಗೆ ಕಳೆದ ಮೂರು ವರ್ಷಗಳಿಂದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಸಂಸ್ಥೆ ವತಿಯಿಂದ ನೀಡುತ್ತಿದ್ದಾರೆ. ಇದರ ಜತೆಗೆ ಶಿಕ್ಷಣ, ಆರೋಗ್ಯ, ಉಚಿತ ವೈದ್ಯಕೀಯ ಶಿಬಿರಗಳನ್ನು ಮಾಡುತ್ತಾ ಬರುತ್ತಿದ್ದಾರೆ ಎಂದು ಶ್ಲಾಘಿಸಿದರು.