ಮಂಗಳೂರು: ನಿಷೇಧಿತ ಮಾದಕ ವಸ್ತು ಗಾಂಜಾ ಹಾಗೂ ಗಾಂಜಾದಿಂದ ತಯಾರಿಸಿದ ಚರಸ್ ಅನ್ನು ಮಾರಾಟ ಮಾಡುತ್ತಿರುವ ಎರಡು ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಹಚ್ಚಿದ ಮಂಗಳೂರು ಪೊಲೀಸರು ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಡುಪಿ ತಾಲೂಕಿನ ಕಾರ್ಕಳದ ಬಜಗೋಳಿ ನಿವಾಸಿ ಸುಕೇತ್ ಕಾವಾ ಅಲಿಯಾಸ್ ಚುಕ್ಕಿ(33), ಉಡುಪಿ ತಾಲೂಕಿನ ಕಾರ್ಕಳದ ಪುಲ್ಕೇರಿ ನಿವಾಸಿ ಸುನಿಲ್(32), ತಮಿಳುನಾಡಿನ ಕೊಯಮತ್ತೂರು ನಿವಾಸಿ ಅರವಿಂದ ಕೆ. (24) ಮತ್ತು ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ವಿಜಯ ಕುಮಾರ್ ಶೆಟ್ಟಿ (24) ಬಂಧಿತ ಆರೋಪಿಗಳು.
ಮೊದಲನೆ ಪ್ರಕರಣದಲ್ಲಿ ಹಿಮಾಚಲ ಪ್ರದೇಶದಿಂದ ತಂದು ನಗರದಲ್ಲಿ ಮಾರಾಟ ಮಾಡಲೆತ್ನಿಸುತ್ತಿದ್ದ ಸುಕೇತ್ ಕಾವಾ ಅಲಿಯಾಸ್ ಚುಕ್ಕಿ, ಸುನಿಲ್, ಅರವಿಂದ ಕೆ. ಎಂಬುವರನ್ನು ಮಂಗಳೂರು ಸೆನ್ ಠಾಣಾ ಪೊಲೀಸರು ಬಂಧಿಸಿ ಚರಸ್ ಸೇರಿದಂತೆ 8 ಲಕ್ಷ ರೂ. ಮೌಲ್ಯದ ಸೊತ್ತನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಹಿಮಾಚಲ ಪ್ರದೇಶದಿಂದ ಗಾಂಜಾ ಸಾಗಣೆ: ಇವರಲ್ಲಿ ಸುಕೇತ್ ಕಾವಾ ಹಾಗೂ ಇನ್ನಿಬ್ಬರು ಆರೋಪಿಗಳು ಟ್ರೆಕ್ಕಿಂಗ್ ಗೆಂದು ಹಿಮಾಚಲ ಪ್ರದೇಶಕ್ಕೆ ಹೋಗಿದ್ದರು. ಅಲ್ಲಿ ತಾನು ಪ್ರವಾಸಿ ಗೈಡ್ ಎಂದು ಸ್ಥಳೀಯರನ್ನು ನಂಬಿಸಿದ್ದಾರೆ. ಬಳಿಕ ಹಿಮಾಚಲ ಪ್ರದೇಶದ ಕುಲುವಿನ ಪಾರ್ವತಿ ವ್ಯಾಲಿ ಎಂಬ 300 ಹಳ್ಳಿಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಗಾಂಜಾ ಹಾಗೂ ಗಾಂಜಾದಿಂದ ತಯಾರು ಮಾಡುವ ಚರಸ್ ಅನ್ನು ಅಲ್ಲಿನ ಹಳ್ಳಿಗರಿಂದ ಖರೀದಿಸಿದ್ದಾರೆ.
ಬಳಿಕ ಅವರು ಅಲ್ಲಿಂದ ರೈಲಿನಲ್ಲಿ ಯಾರಿಗೂ ಅನುಮಾನ ಬಾರದಂತೆ ಸಾಗಣೆ ಮಾಡಿದ್ದಾರೆ. ಬಳಿಕ ಅದನ್ನು ಡ್ರಗ್ ಪೆಡ್ಲರ್ ಗಳ ಮೂಲಕ ಮಂಗಳೂರಿನ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಪೂರೈಸಿ ಹಣ ಮಾಡುವ ದಂಧೆಯಲ್ಲಿ ನಿರತರಾಗಿದ್ದರು. ಈ ಮಾಹಿತಿ ಅರಿತ ಸೆನ್ ಪೊಲೀಸರು ದಾಳಿ ನಡೆಸಿ ಈ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 500 ಗ್ರಾಂ ಚರಸ್, ಒಂದು ಕೆ ಜಿ ಗಾಂಜಾ, ಗಾಂಜಾ ಸಾಗಾಟಕ್ಕೆ ಬಳಸಿದ ರಿಟ್ಝ್ ಕಾರು ಹಾಗೂ ಮೂರು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 8 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.