ಮಂಗಳೂರು:ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಸುರತ್ಕಲ್ನ ಅಣ್ಣಪ್ಪಸ್ವಾಮಿ (23) ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮೊಹಮ್ಮದ್ ಜುನೈದ್ (29) ಹಾಗೂ ಮಂಗಳೂರಿನ ಕುಳಾಯಿಯ ಎಂ.ಕೆ. ಆಕಾಶ (24) ಬಂಧಿತ ಆರೋಪಿಗಳು.
ಡಿಸೆಂಬರ್ 21 ರಂದು ಬಜ್ಪೆ ಪೊಲೀಸ್ ಠಾಣೆಯ ಪಿಎಸ್ಐ ಗುರಪ್ಪ ಕಾಂತಿ ಹಾಗೂ ಸಿಬ್ಬಂದಿ ಜೊತೆ ಬಜ್ಪೆ ಗ್ರಾಮದ ಶಾಂತಿಗುಡ್ಡೆ ಚೆಕ್ ಪಾಯಿಂಟ್ ಬಳಿ ಬಜ್ಪೆಯಿಂದ ಕಳವಾರು ಕಡೆಗೆ ಹಾದು ಹೋಗಿರುವ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ಮೂವರು ಆರೋಪಿಗಳು ಮಾದಕ ವಸ್ತು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕಳವಾರು ಕಡೆಯಿಂದ ಬೈಕ್ನಲ್ಲಿ ಮೂರು ಜನ ಬರುತ್ತಿದ್ದನ್ನು ಕಂಡು ಬೈಕ್ ನಿಲ್ಲಿಸುವಂತೆ ಸೂಚನೆ ನೀಡಿದಾಗ ಆರೋಪಿಗಳು ಬೈಕ್ ಅನ್ನು ನಿಲ್ಲಿಸಿ ಸ್ಥಳದಿಂದ ಓಡಿ ಹೋಗಲು ಪ್ರಯತ್ನಿಸಿದ್ದರು. ಪಿಎಸ್ಐ ಮತ್ತು ಸಿಬ್ಬಂದಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಬೈಕ್ನಲ್ಲಿ ಮಾದಕ ವಸ್ತು ಎಂಡಿಎಂಎ ಇರಿಸಿಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ಹೋಗುತ್ತಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಇಬ್ಬರು ಪಂಚರನ್ನು ಕರೆದು ಆರೋಪಿಗಳ ವಶದಲ್ಲಿದ್ದ 30 ಸಾವಿರ ರೂಪಾಯಿ ಮೌಲ್ಯದ 6.27 ಗ್ರಾಂ ತೂಕದ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್ ಮತ್ತು 40 ಸಾವಿರ ರೂಪಾಯಿ ಮೌಲ್ಯದ ಬೈಕ್ ಮತ್ತು ಇತರ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.