ಮಂಗಳೂರು (ದಕ್ಷಿಣ ಕನ್ನಡ) :ಕಾರು ಮತ್ತು ಬೈಕ್ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಎಎಸ್ಐಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಶಕ್ತಿನಗರದ ನಿವಾಸಿ ಪುನೀತ್ ಶೆಟ್ಟಿ (35) ಎಂಬಾತನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ಆರೋಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಕರಣ: ಕಾರೊಂದು ಬೈಕ್ಗೆ ತಾಗಿದ ವಿಚಾರದಲ್ಲಿ ಕಾರು ಚಾಲಕ ಪುನೀತ್ ಶೆಟ್ಟಿ ಮತ್ತು ಬೈಕ್ ಸವಾರನ ಮಧ್ಯೆ ವಾಗ್ವಾದ ನಡೆದಿದೆ. ಈ ಕೋಪದ ಭರದಲ್ಲಿ ಬೈಕ್ ಸವಾರ ಕಾರಿಗೆ ಡಿಕ್ಕಿ ಹೊಡೆದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಉರ್ವ ಠಾಣೆಯ ಎಎಸ್ಐಗೆ ಕರೆ ಮಾಡಿದ ಪುನೀತ್ ಶೆಟ್ಟಿ ಆರೋಪಿ ಬೈಕ್ ಸವಾರನನ್ನು ಬಂಧನ ಮಾಡಲು ಒತ್ತಾಯಿಸಿದ್ದಾನೆ.
ಈ ಸಂದರ್ಭ ಎಎಸ್ಐ ಸ್ಪಷ್ಟನೆ ನೀಡಿದರೂ ಕೇಳಿಸಿಕೊಳ್ಳದ ಪುನೀತ್ ಶೆಟ್ಟಿ 'ಆತನನ್ನು ಬಂಧಿಸದಿದ್ದರೆ ಕಮಿಷನರ್ಗೆ ಹೇಳಿ ವರ್ಗಾವಣೆ ಮಾಡಿಸುತ್ತೇನೆ' ಎಂದು ಹೇಳಿದ್ದಲ್ಲದೇ, ಸುಮಾರು 8 ನಿಮಿಷಗಳ ಸಂಭಾಷಣೆ ನಡೆಸಿ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಎಎಸ್ಐಗೆ ಬೆದರಿಕೆ ಹಾಕಿದ್ದಾನೆ. ಆರೋಪಿ ವಿರುದ್ಧ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಹಾಗೂ ಫೋನ್ ಮೂಲಕ ಬೆದರಿಕೆ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.