ಮಂಗಳೂರು : ಬಂಟ ಸಮುದಾಯವನ್ನು ಪ್ರವರ್ಗ - 3(ಬಿ)ದಿಂದ ಪ್ರವರ್ಗ-2(ಎ)ಗೆ ವರ್ಗಾಯಿಸಲು ಎಲ್ಲಾ ಪ್ರಯತ್ನವನ್ನು ಮಾಡಲಾಗುತ್ತದೆ. ಬಂಟ ಸಮುದಾಯದ ಮುಖಂಡರು ಮುಂದೆ ಬಂದಲ್ಲಿ ಲೋಕಸಭೆಯಲ್ಲಿ ಅದನ್ನು ಅನುಮೋದಿಸುವ ಕಾರ್ಯ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ನಗರದ ಗೀತಾ ಎಸ್.ಎಂ.ಶೆಟ್ಟಿ ಸಭಾಂಗಣದಲ್ಲಿ ನಡೆದ ಬೃಹತ್ ಸಮಾಜ ಕಲ್ಯಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಚೇರಿಗೆ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಿದ್ದಲ್ಲಿ ಅದಕ್ಕೆ ಬೇಕಾಗಿರುವ ಸಹಕಾರವನ್ನು ಸರ್ಕಾರದಿಂದ ಒದಗಿಸಲಾಗುತ್ತದೆ ಎಂದರು.
ಸಾಧಕರಾದ ಬಳಿಕ ಯಾರಿಗೂ ಸನ್ಮಾನದ ಅಗತ್ಯವಿಲ್ಲ. ವಿದ್ಯಾರ್ಥಿಗೆ, ಕಷ್ಟದಲ್ಲಿರುವವನನ್ನು ಗುರುತಿಸಿ ಅವನಿಗೆ ಕೈಲಾದ ಸಹಾಯ ಮಾಡಿದ್ದಲ್ಲಿ ಅವನು ಜೀವನ ಪರ್ಯಂತ ಸಮಾಜವನ್ನು ನೆನಪಿನಲ್ಲಿಡುತ್ತಾನೆ. ಯಾವಾಗ ಕಷ್ಟದಲ್ಲಿರುವಾಗ ಯಾರೊಂದಿಗೆ ಸಮಾಜ ನಿಲ್ಲುತ್ತೋ, ಅವನು ಸಮಾಜವನ್ನು ಗೌರವಿಸುತ್ತಾನೆ. ಇಂದು ಆ ಕೆಲಸವನ್ನು ಐಕಳ ಹರೀಶ್ ಶೆಟ್ಟಿಯವರು ಜಾಗತಿಕ ಬಂಟ ಸಂಘದ ಒಕ್ಕೂಟದ ಮೂಲಕ ಮಾಡಿದ್ದಾರೆ ಎಂದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಭಾರತ ಅನೇಕ ಜಾತಿ, ಅನೇಕ ಧರ್ಮ, ಅನೇಕ ಭಾಷೆಯ ಜನರಿರುವ ವಿಶಿಷ್ಟ ಪರಂಪರೆಯಿರುವ ದೇಶ. ಭಾರತಕ್ಕೆ ಹೋಲಿಕೆಯಾಗುವಂತಹ ದೇಶ ಜಗತ್ತಿನಲ್ಲಿ ಇನ್ನೊಂದಿಲ್ಲ. ಇಷ್ಟೊಂದು, ಭಾಷೆ, ಜನಾಂಗವಿರುವ ದೇಶ ಜಗತ್ತಿನಲ್ಲಿಯೇ ಇನ್ನೊಂದಿಲ್ಲ. ಅದರಲ್ಲೊಂದು ಸಣ್ಣ ಜಾತಿ ಬಂಟ ಸಮುದಾಯ ಎಂದು ಹೇಳಿದರು.
ಮಂಗಳೂರಿನಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಬೃಹತ್ ಸಮಾಜ ಕಲ್ಯಾಣ ಕಾರ್ಯಕ್ರಮ ನಡೆಸಲಾಯಿತು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಬಂಟ ಸಮುದಾಯದವರು ಬಹಳಷ್ಟು ಎತ್ತರಕ್ಕೆ ಏರಿದ್ದಾರೆ. ಆದ್ದರಿಂದ ಬಂಟ ಸಮುದಾಯದವರು ಯಾವುದೇ ರೀತಿಯಲ್ಲಿ ಕೀಳರಿಮೆಪಡುವ ಅಗತ್ಯವಿಲ್ಲ. ಆದರೆ, ಈ ಸಮುದಾಯದ ಎಲ್ಲರೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂಬ ಅಭಿಪ್ರಾಯ ಕೆಲವರಲ್ಲಿದೆ. ಆದರೆ, ಅದು ಸತ್ಯಕ್ಕೆ ದೂರವಾದ ಮಾತು. ಆದ್ದರಿಂದ ಈ ಸಮುದಾಯದಲ್ಲಿಯೂ ಬಡವರಿದ್ದಾರೆ ಎಂಬುದು ಸ್ಪಷ್ಟ. ಇಂಥಹ ಅಶಕ್ತರನ್ನು ಮೇಲ್ದರ್ಜೆಗೇರಿಸುವ ನೆಲೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಬಹುದೊಡ್ಡ ಕಾರ್ಯವನ್ನು ಮಾಡುತ್ತಿದೆ ಎಂದು ರಮಾನಾಥ ರೈ ಹೇಳಿದರು.
ಇದನ್ನೂ ಓದಿ: ನಳಿನ್ ಕುಮಾರ್ ಇನ್ನೂ ರಾಜಕೀಯವಾಗಿ ಬೆಳೆದಿಲ್ಲ, ಪ್ರಬುದ್ಧತೆಯೂ ಇಲ್ಲ: ಸಿದ್ದರಾಮಯ್ಯ
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪುರಸ್ಕೃತ ನಾದಸ್ವರ ವಾದಕ ಲಿಂಗಪ್ಪ ಶೇರಿಗಾರ ಕಟೀಲು, ಮುಖ್ಯಮಂತ್ರಿ ಪದಕ ವಿಜೇತ ಆರಕ್ಷಕ ಗೋಪಾಲಕೃಷ್ಣ ಹಾಗೂ ಶೈಕ್ಷಣಿಕ ಸಾಧಕಿ ಅಕ್ಷತಾ ವಿ. ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಯಾನೆ ನಾವಡರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ, ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಕೆ.ಎಂ.ಶೆಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಕುಮಾರ್ ರೈ ಮತ್ತಿತರರು ಉಪಸ್ಥಿತರಿದ್ದರು.